Sunday, 11 September 2016

Sarkari corner

Basayya Jamalur Kalabhavi
ಜನವರಿ- 2016 ತಿಂಗಳಿನ ಸರ್ಕಾರಿ ಕಾರ್ನರ್
ಪ್ರಶ್ನೆಗಳು.
January 19, 2016 ಸರ್ಕಾರಿ ಕಾರ್ನರ್
1-1-16
ನಾನು 1987ರಲ್ಲಿ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ
ಅನುದಾನ ರಹಿತ ಶಾಲೆಗೆ ಸೇರಿದೆ. ಈ ಶಾಲೆಯು 1992ರಲ್ಲಿ
ಅನುದಾನಕ್ಕೊಳಪಟ್ಟಿದ್ದು, ನನ್ನ ಹಿಂದಿನ 6 ವರ್ಷಗಳ
ಸೇವೆಯನ್ನು ನಿವೃತ್ತಿ ವೇತನಕ್ಕೆ ಪರಿಗಣಿಸುತ್ತಾರೆಯೇ?
ಸದ್ಯ ನನಗೆ 2 ವರ್ಷ ಮಾತ್ರ ಸೇವಾವಧಿ ಉಳಿದಿದ್ದು, ನನಗೆ
ವಿಶ್ರಾಂತಿ ವೇತನ ದೊರಕುತ್ತದೆಯೇ?
|ಕೆ.ಎಲ್.ವಿಜಯಕುಮಾರ್, ಕುಣಿಗಲ್, ತುಮಕೂರು
ನಿಮ್ಮ ಹಿಂದಿನ ಸೇವೆಯನ್ನು ಸರ್ಕಾರ ನೀಡುವ
ಅನುಮೋದನೆಯ ಷರತ್ತುಗಳಿಗೊಳಪಟ್ಟು ರಜೆ ಮತ್ತು
ನಿವೃತ್ತಿ ವೇತನಕ್ಕೆ ಪರಿಗಣಿಸಲಾಗುತ್ತದೆ.
***
***
2-1-16.
ನಾನು 3 ವರ್ಷಗಳಿಂದ ರಾಜ್ಯ ಸರ್ಕಾರಿ ನೌಕರನಾಗಿ ಸೇವೆ
ಸಲ್ಲಿಸುತ್ತಿದ್ದು, ಸರ್ಕಾರದ ಬೇರೊಂದು ನೌಕರಿಗೆ ಆನ್​ಲೈನ್​
ನಲ್ಲಿ ಅರ್ಜಿ ಸಲ್ಲಿಸುವಾಗ ನೀವು ಸರ್ಕಾರಿ ನೌಕರರೇ? ಎಂಬ
ಕಾಲಂನಲ್ಲಿ ಇಲ್ಲ ಎಂದು ನಮೂದಿಸಿ ಆಯ್ಕೆಯಾಗಿರುತ್ತೇನೆ.
ನಾನು ನಮ್ಮ ಮೇಲಧಿಕಾರಿಗಳಿಂದ ಎನ್​ಒಸಿ ಪಡೆಯದೇ
ಅರ್ಜಿಯಲ್ಲಿ ಇಲ್ಲ ಎಂದು ನಮೂದಿಸಿರುವುದು
ಅಪರಾಧವಾದೀತೇ? ಭವಿಷ್ಯದಲ್ಲಿ ತೊಡಕಾದೀತೇ?
| ರಘುರಾಮ, ಮಂಡ್ಯ
ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ)
ನಿಯಮಾವಳಿ 1977ರ ರೀತ್ಯ ಪ್ರತಿಯೊಬ್ಬ ಸರ್ಕಾರಿ
ನೌಕರರು ಬೇರೊಂದು ಹುದ್ದೆಗೆ ಅರ್ಜಿ ಸಲ್ಲಿಸುವಾಗ
ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯುವುದು
ಕಡ್ಡಾಯವಾಗಿದ್ದು, ನೀವು ಅರ್ಜಿಯಲ್ಲಿ ಇಲ್ಲ ಎಂದು
ನಮೂದಿಸಿರುವುದು ಶಿಸ್ತು ನಿಯಮಾವಳಿಯ
ಉಲ್ಲಂಘನೆಯಾಗುತ್ತದೆ. ಇದರಿಂದಾಗಿ ನೀವು ಎರಡೂ
ಕಡೆಯೂ ಉದ್ಯೋಗಾವಕಾಶವನ್ನು ಕಳೆದುಕೊಳ್ಳುವ
ಸಂಭವವುಂಟಾಗುತ್ತದೆ.
***
3-1-16.
1963ರ ಕರ್ನಾಟಕ ಸರ್ಕಾರಿ ಸೇವಾ (ವೈದ್ಯೋಪಚಾರ)
ನಿಯಮಾವಳಿ ರೀತ್ಯ ತಂದೆ ತಾಯಿಯವರ ಮಾಸಿಕ ಆದಾಯ
ರೂ. 4,000ಕ್ಕಿಂತ ಕಡಿಮೆ ಇದ್ದರೆ ವೈದ್ಯಕೀಯ ವೆಚ್ಚದ
ಹಿಂಭರ್ತಿಗೆ ಅರ್ಹರು. ಈ ನಿಯಮದ ಆದಾಯದ ಮಿತಿ
ಹೆಚ್ಚಿಸಲಾಗಿದೆಯೇ? ಅಥವಾ ಪೂರ್ಣವಾಗಿ ಮಿತಿಯನ್ನು
ತೆಗೆಯಲಾಗಿದೆಯೇ? ದಯವಿಟ್ಟು ತಿಳಿಸಿ.
|ಕೆ. ರಮೇಶ್ ಸಿದ್ಧಾರ್ಥ ನಗರ, ಮೈಸೂರು
ಕರ್ನಾಟಕ ಸರ್ಕಾರಿ ನೌಕರರ ವೈದ್ಯಕೀಯ (ಚಿಕಿತ್ಸೆ)
ನಿಯಮಾವಳಿ 63ರ ನಿಯಮ 2(ಜಿಜಿ) ಪ್ರಕಾರ ತಂದೆತಾಯಿಯವರ
ವಾರ್ಷಿಕ ಆದಾಯ 6,000 ರೂಪಾಯಿಗಳನ್ನು ಮೀರದಿದ್ದರೆ
ಹಿಂಭರ್ತಿಗೆ ಅರ್ಹರು ಎಂದು ತಿದ್ದುಪಡಿ ಮಾಡಲಾಗಿದೆ.
(ಸಆಸಂಖ್ಯೆ ಡಿಪಿಎಆರ್ 26, ಎಸ್​ಎಂಆರ್ 2012, ದಿನಾಂಕ
27-3-2012) (ಹೆಚ್ಚಿನ ವಿವರಗಳಿಗೆ ಲ. ರಾಘವೇಂದ್ರರವರು
ಬರೆದ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಚಿಕಿತ್ಸಾ )
ಕಾನೂನು ಕೈಪಿಡಿಯನ್ನು ನೋಡಬಹುದು.)
***
4-1-16
ಮಹಿಳಾ ನೌಕರರು ಎಷ್ಟು ಬಾರಿ ಹೆರಿಗೆ ರಜೆ ಸೌಲಭ್ಯ
ಪಡೆಯಬಹುದು? ಎಷ್ಟು ಅವಧಿಯವರೆಗೆ ಪಡೆಯಬಹುದು?
ಪ್ರಸವಪೂರ್ವ/ ಪ್ರಸವೋತ್ತರವೆಂಬ ನಿಯಮವೇನಾದರೂ
ಇದೆಯೇ ? ಮಗುವಿನ ಆರೈಕೆಗೆ ಮತ್ತೆ ರಜೆಯನ್ನು
ಮುಂದುವರಿಸಬಹುದೇ?
| ಸೀಮಾ ಕುಣಿಗಲ್ ತಾಲೂಕು, ತುಮಕೂರು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರ
ರೀತ್ಯ ಹೆರಿಗೆ ರಜೆಯನ್ನು ಪ್ರಸವಪೂರ್ವದಿಂದಲೇ 180
ದಿನಗಳವರೆಗೆ ಪಡೆಯಬಹುದು. ಆದರೆ ಈ ರಜೆ 2ಕ್ಕಿಂತ ಕಡಿಮೆ
ಮಕ್ಕಳಿರುವ ನೌಕರರಿಗೆ ಮಾತ್ರ ಮಂಜೂರು
ಮಾಡಲಾಗುತ್ತದೆ. ಮಗುವಿನ ಆರೈಕೆಗಾಗಿ 60 ದಿನಗಳಿಗೆ
ಮೀರದಂತೆ ವೈದ್ಯಕೀಯ ಪ್ರಮಾಣ ಪತ್ರದ ಆಧಾರದ
ಮೇಲೆ ಮುಂದುವರಿದ ಇತರ ರಜೆಯನ್ನು ಪಡೆಯಬಹುದು.
***
6-1-15.
ಒಂದು ಹುದ್ದೆಯಲ್ಲಿ ಸರ್ಕಾರ ನಿಗದಿಪಡಿಸಿದ ಗರಿಷ್ಠ ವೇತನ
ಮಿತಿ ತಲುಪಿದ ಮೇಲೆ ಲಭ್ಯವಾಗುವ ಸ್ಥಗಿತ ವೇತನದ ಬಡ್ತಿ
ಪಡೆಯಲು ಇಲಾಖೆಯ ನೇಮಕಾತಿ ಪ್ರಾಧಿಕಾರದಿಂದ ಪ್ರಥಮ
ಸ್ಥಗಿತ ವೇತನ ಮೊದಲ್ಗೊಂಡು ಪ್ರತಿವರ್ಷ ಮಂಜೂರಾತಿ
ಪತ್ರ ಪಡೆಯಬೇಕೇ? ಹಾಗೆ ಮಂಜೂರಾತಿ ಪಡೆಯದೆ ಸ್ಥಗಿತ
ವೇತನ ಬಡ್ತಿಯನ್ನು ಕಚೇರಿ ಮುಖ್ಯಸ್ಥರ
ಅನುಮತಿಯೊಂದಿಗೆ ಸೇರ್ಪಡೆ ಮಾಡಿ ತೆಗೆದದ್ದಾದರೆ ನಿವೃತ್ತಿ
ವೇತನದ ಸಂದರ್ಭದಲ್ಲಿ ಏನಾದರೂ
ತೊಂದರೆಯಾಗುತ್ತದೆಯೇ?
|ಶಿವಾನಂದ ಬಿ. ಮರಿಗೇರಿ ಸಹಶಿಕ್ಷಕರು, ಚಿಕ್ಕೊಪ್ಪ, ಬೆಳಗಾವಿ
ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 3, ಎಫ್​ಆರ್​ಪಿ 96, ದಿನಾಂಕ
18-3-1996ರ ಪ್ಯಾರಾ 7ರಲ್ಲಿ ಎ ಮತ್ತು ಬಿ ಗುಂಪಿನ
ಹುದ್ದೆಗಳಿಗೆ ಸಂಬಂಸಿದಂತೆ ಸ್ಥಗಿತ ವೇತನವನ್ನು ಆಡಳಿತ
ಇಲಾಖೆಯ ಮುಖ್ಯಸ್ಥರು ಮಂಜೂರು ಮಾಡುವ ಅಧಿಕಾರ
ಹೊಂದಿರುತ್ತಾರೆ. ಅದೇ ರೀತಿಯಾಗಿ ಸಿ ಮತ್ತು ಡಿ
ಗುಂಪಿನ ಹುದ್ದೆಗಳಿಗೆ ಸಂಬಂಧಿಸಿದಂತೆ ಜಿಲ್ಲಾಮಟ್ಟದ
ಅಧಿಕಾರಿಗಳು ಮಂಜೂರು ಮಾಡುವ
ಪ್ರಾಧಿಕಾರಿಯಾಗಿರುತ್ತಾರೆ. ಆದ ಕಾರಣ ನೀವು
ಜಿಲ್ಲಾಮಟ್ಟದ ಅಧಿಕಾರಿಯಿಂದ (ಡಿಡಿಪಿಐ) ಮಂಜೂರು
ಮಾಡಿಸಿಕೊಂಡರೆ ನಿವೃತ್ತಿ ಸಂದರ್ಭದಲ್ಲಿ ಯಾವುದೇ
ತೊಂದರೆಯಾಗುವುದಿಲ್ಲ.
***
7-1-16.
ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಳಿಗೆ
ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದೇನೆ.
ನಾನು ಸರ್ಕಾರಿ ನೌಕರನಾಗಿದ್ದು ಈ ಚುನಾವಣೆಗೆ ಸ್ಪರ್ಧಿಸಲು
ಸರ್ಕಾರದ ಪೂರ್ವಾನುಮತಿ ಅಗತ್ಯವೇ? |ನಟೇಶ್
ಕರ್ನಾಟಕ ಸರ್ಕಾರಿ ಸೇವಾ (ನಡತೆ ) ನಿಯಮಗಳು 1966ರ
ನಿಯಮ 6ರ ಪ್ರಕಾರ ಸರ್ಕಾರಿ ನೌಕರರು ಭಾರತದ ಸಾರ್ವಭೌಮತ್ವ
ಮತ್ತು ಅಖಂಡತೆಗೆ ಅಥವಾ ನೈತಿಕತೆಯ ಹಿತಾಸಕ್ತಿಗೆ ಧಕ್ಕೆ
ಉಂಟು ಮಾಡುವಂಥ ಸಂಘ-ಸಂಸ್ಥೆಗಳಿಗೆ
ಸೇರಿಕೊಳ್ಳತಕ್ಕದ್ದಲ್ಲ ಎಂದು ನಿರ್ಬಂಧಿಸಲಾಗಿದೆ. ಆದರೆ,
ನಿಯಮ 16 (3)ರ ಪ್ರಕಾರ ಸಾಹಿತ್ಯಿಕ, ವೈಜ್ಞಾನಿಕ ಅಥವಾ
ಧರ್ವತ್ಮಕ ಸಂಘಗಳ ನಿರ್ವಹಣೆಯಲ್ಲಿ ಸರ್ಕಾರದ
ಪೂರ್ವಾನುಮತಿಯಿಲ್ಲದಿದ್ದರೂ ಸರ್ಕಾರಿ ನೌಕರರು
ಪಾಲ್ಗೊಳ್ಳಬಹುದು ಎಂದು ಸೂಚಿಸಲಾಗಿದೆ. ಅಲ್ಲದೆ
ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಗಳಲ್ಲಿ ಸರ್ಕಾರಿ ನೌಕರರು
ಪರಿಷತ್ತಿನ ಕಾರ್ಯಕಾರಿ ಮಂಡಳಿಯ ಚುನಾವಣೆಗೆ ಸ್ಪರ್ಧಿಸುವ
ಬಗ್ಗೆ ನಿರ್ದಿಷ್ಟವಾದ ಷರತ್ತುಗಳು ಇಲ್ಲವಾದ್ದರಿಂದ
ಯಾವುದೇ ಅಭ್ಯರ್ಥಿಗಳ ನಾಮಪತ್ರಗಳನ್ನು
ತಿರಸ್ಕರಿಸುವಂತಿಲ್ಲ ಎಂಬುದಾಗಿ ಪರಿಷತ್ತಿನ ಕೇಂದ್ರ
ಚುನಾವಣಾಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಈ
ಹಿನ್ನೆಲೆಯಲ್ಲಿ ನೀವು ಪರಿಷತ್ತಿನ ಕಾರ್ಯಕಾರಿ ಸಮಿತಿಯ
ಚುನಾವಣೆಗೆ ಸ್ಪರ್ಧಿಸಬಹುದಾಗಿದೆ. (ಹೆಚ್ಚಿನ ವಿವರಗಳಿಗೆ ಎಂ.
ಉಮೇಶ್ ಅವರ ನಡತೆ ನಿಯಮಗಳು ಸಮಗ್ರ ಕೈಪಿಡಿಯನ್ನು
ನೋಡಬಹುದು).
ಕಾನೂನು ಪುಸ್ತಕ ಮಾಹಿತಿ
ಲ. ರಾಘವೇಂದ್ರ ಅವರು ಬರೆದಿರುವ ಕರ್ನಾಟಕ ಸರ್ಕಾರಿ
ಸೇವಾ ನಿಯಮಗಳು (ಕೆಸಿಎಸ್​ಆರ್​ಎಸ್ ) ಕೃತಿಯು ರಾಜ್ಯ
ಸರ್ಕಾರಿ ನೌಕರರಿಗೆ ಲಭ್ಯವಾಗತಕ್ಕ ರಜೆ, ಸೇರಿಕೆ ಕಾಲ, ವೇತನ
ನಿಗದೀಕರಣ, ನಿವೃತ್ತಿ ವೇತನ ಸೌಲಭ್ಯಗಳು, ಪ್ರಯಾಣ
ಭತ್ಯೆ, ಪ್ರಭಾರ ಭತ್ಯೆ, ಇತ್ಯಾದಿ ಅಂಶಗಳನ್ನು ಒಳಗೊಂಡ
ಕಾನೂನು ಸಂಹಿತೆಯಾಗಿದೆ. ಈ ಕೃತಿ ನೂತನ ವೇತನ
ಶ್ರೇಣಿಯೊಂದಿಗೆ ಕಾಲಮಿತಿ ಬಡ್ತಿ ವೇತನಗಳು 20, 25, 30
ವರ್ಷಗಳ ಸೇವಾ ಅವಧಿಗೆ ಹೆಚ್ಚುವರಿ ವೇತನ ಬಡ್ತಿ, ಇತ್ಯಾದಿ
ಮಾಹಿತಿಗಳನ್ನು ಒಳಗೊಂಡಿದೆ. ಬೆಂಗಳೂರಿನ ಶ್ರೀ
ರಾಘವೇಂದ್ರ ಪ್ರಕಾಶನದವರು ಪ್ರಕಟಿಸಿದ್ದಾರೆ.
***
8-1-16
ನಾನು ರಾಜ್ಯ ಸರ್ಕಾರಿ ಸೇವೆಯಲ್ಲಿದ್ದು, 2016ರ ಮೇ
31ರಂದು ನಿವೃತ್ತನಾಗಲಿದ್ದೇನೆ. ನಾನು 15 ದಿನಗಳ
ಸಾಂರ್ದಭಿಕ ರಜೆ ಹಾಗೂ 2 ದಿನಗಳ ನಿರ್ಬಂಧಿತ ರಜೆ
ಉಪಯೋಗಿಸಿಕೊಳ್ಳಲು ಸಾಧ್ಯವೇ?
|ಶಿವಾನಂದ ಜಲಸಂಪನ್ಮೂಲ ಇಲಾಖೆ, ಕಲಬುರಗಿ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಅನುಬಂಧ ಬಿ
ಯಲ್ಲಿ ಸರ್ಕಾರಿ ನೌಕರರಿಗೆ ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ 15
ದಿನಗಳ ಕಾಲ ಸಾಂರ್ದಭಿಕ ರಜೆ ಮಂಜೂರು ಮಾಡಲು
ಅವಕಾಶವಿದ್ದು, ಒಂದು ಬಾರಿಗೆ 7 ದಿನಗಳಿಗಿಂತ ಹೆಚ್ಚು
ಮಂಜೂರು ಮಾಡಬಾರದೆಂದು ತಿಳಿಸಲಾಗಿದೆ. ಈ
ನಿಯಮಾವಳಿಯಲ್ಲಿ ನೀವು 2016ರ ಮೇನಲ್ಲಿ
ನಿವೃತ್ತಿಯಾಗುವುದರಿಂದ 15 ದಿನಗಳ ಸಾಂರ್ದಭಿಕ
ರಜೆಯನ್ನು ಉಪಯೋಗಿಸಿಕೊಳ್ಳಬಹುದಾಗಿದೆ. ಅಲ್ಲದೆ 2
ದಿನಗಳ ನಿರ್ಬಂಧಿತ ರಜೆಯನ್ನೂ ಪಡೆದುಕೊಳ್ಳಬಹುದು.
***
9-1-16
ನನ್ನ ಪತಿ ಸರ್ಕಾರಿ ನೌಕರಿಯಲ್ಲಿರುವಾಗಲೇ ನಿಧನರಾಗಿದ್ದಾರೆ.
ನನ್ನ ಮಗಳು ಅವಿವಾಹಿತೆಯಾಗಿದ್ದು, ಸರ್ಕಾರಿ
ನೌಕರಿಯಲ್ಲಿದ್ದಾಳೆ. ನನ್ನ ಮಗನಿಗೆ 20 ವರ್ಷ ತುಂಬಿದೆ. ನನ್ನ
ಮಗನಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ
ಸಿಗುತ್ತದೆಯೇ?
|ಸಾವಿತ್ರಮ್ಮ ಹಿರಿಯೂರು, ಚಿತ್ರದುರ್ಗ
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ನೇಮಕ)
ನಿಯಮಾವಳಿ ನಿಯಮ 1996ರ ಮೇರೆಗೆ ನಿಮ್ಮ ಪತಿಯವರು
ನಿಧನಹೊಂದಿದ 1 ವರ್ಷದೊಳಗೆ ಅನುಕಂಪದ ಮೇಲೆ ನೇಮಕ
ಮಾಡಿಕೊಳ್ಳಲು ಸಂಬಂಧಿತ ನೇಮಕಾತಿ
ಪ್ರಾಧಿಕಾರಕ್ಕೆ ನಿಮ್ಮ ಮಗ ಅರ್ಜಿ ಸಲ್ಲಿಸಬೇಕು. ಈ ಅರ್ಜಿಯ
ಆಧಾರದ ಮೇಲೆ ಅವನಿಗೆ ವಿದ್ಯಾರ್ಹತೆಯ ಹಿನ್ನೆಲೆಯಲ್ಲಿ
ಸರ್ಕಾರಿ ನೌಕರಿ ಲಭ್ಯವಾಗುತ್ತದೆ.
***
10:1:16.
ನಾನು ವಿಶ್ವವಿದ್ಯಾನಿಲಯದ ಮುದ್ರಣಾಲಯದಲ್ಲಿ
ಕಂಪೋಸಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು 2014ರ
ಮಾರ್ಚ್​ನಲ್ಲಿ ಸ್ವಯಂಚಾಲಿತ ವಿಶೇಷ ಬಡ್ತಿ ಪಡೆದಿದ್ದೇನೆ.
ಅಲ್ಲದೆ 2015ರಲ್ಲಿ ಪದೋನ್ನತಿಯನ್ನು ಹೊಂದಿದ್ದು ನನಗೆ
ಈ ಪದೋನ್ನತಿಯ ವೇತನ ಬಡ್ತಿಯನ್ನು ನೀಡಲು
ಬರುವುದಿಲ್ಲವೆಂದು ತಿಳಿಸಿರುತ್ತಾರೆ. ಸೂಕ್ತ ಪರಿಹಾರ
ನೀಡಿ.
| ಪಿ.ವಿ. ಮಂಜುನಾಥ್ ಮೈಸೂರು ವಿಶ್ವವಿದ್ಯಾನಿಲಯ,
ಮೈಸೂರು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ (ಸ್ವಯಂಚಾಲಿತ)
ವಿಶೇಷ ಮುಂಬಡ್ತಿ ನಿಯಮದಂತೆ ನೀವು ವೇತನ
ಬಡ್ತಿಯನ್ನು ಪಡೆದಿದ್ದರೂ ಸಹ 2015ರಲ್ಲಿ
ಪದೋನ್ನತಿಯನ್ನು ಹೊಂದಿರುವುದರಿಂದ ಕರ್ನಾಟಕ
ಸರ್ಕಾರಿ ಸೇವಾ ನಿಯಮಾವಳಿಯ 42ಬಿ ಮತ್ತು 42ಸಿ ಮೇರೆಗೆ
ನಿಮ್ಮ ವೇತನವನ್ನು ನಿಗದಿ ಪಡಿಸಬೇಕಾಗುತ್ತದೆ. 2
ವರ್ಷದೊಳಗೆ ಪದೋನ್ನತಿ ಪಡೆದರೆ ಅದರ ವೇತನ
ಬಡ್ತಿಯನ್ನು ನೀಡಲಾಗುವುದಿಲ್ಲವೆಂದು ಹೇಳುವುದು
ನಿಯಮಬದ್ಧವಲ್ಲ.
***
11-1-16.
ನಾನು ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ದಿನಗೂಲಿ
ನೌಕರನಾಗಿ 1-1-1990ರಿಂದ ಸಂಖ್ಯಾತಿರಿಕ್ತ ಹುದ್ದೆಯಲ್ಲಿ
ಕಾಯಂ ಆಗಿದ್ದು 26 ವರ್ಷಗಳಿಂದ ಒಂದೇ ಹುದ್ದೆಯಲ್ಲಿ
ಕಾರ್ಯ ನಿರ್ವಹಿಸುತ್ತಿದ್ದೇನೆ. ಇದುವರೆಗೂ ಒಂದು
ಪದೋನ್ನತಿಯೂ ದೊರಕಿರುವುದಿಲ್ಲ. ಜ್ಯೇಷ್ಠತಾ
ಪಟ್ಟಿಯನ್ನು ಸಹ ತಯಾರಿಸದೆ ನನ್ನನ್ನು ಬಡ್ತಿಗೆ
ಪರಿಗಣಿಸುತ್ತಿಲ್ಲ. ಅನುಭವ ಅರ್ಹತೆಯಿದ್ದರೂ ನನಗೆ ಬಡ್ತಿ
ನೀಡಲಾಗಿಲ್ಲ. ದಯವಿಟ್ಟು ಪರಿಹಾರ ತಿಳಿಸಿ.
|ಮುರುಗೇಶ ಸಂಗಮ ಜಿಲ್ಲಾ ಕೇಂದ್ರ ಗ್ರಂಥಾಲಯ,
ಬಬಲೇಶ್ವರ ವಿಜಯಪುರ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯಂತೆ
ಸಂಖ್ಯಾತಿರಿಕ್ತ ಹುದ್ದೆಗಳು ಸಹ ತಾತ್ಕಾಲಿಕ
ಹುದ್ದೆಯಾಗಿದ್ದು ಆ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಎಲ್ಲ
ನೌಕರರು ಪದೋನ್ನತಿ ಇತ್ಯಾದಿ ಸೇವಾ ಮತ್ತು ಆರ್ಥಿಕ
ಸೌಲಭ್ಯಗಳಿಗೆ ಅರ್ಹರು. ಹೀಗಿರುವಲ್ಲಿ ಜ್ಯೇಷ್ಠತಾ
ಪಟ್ಟಿಯನ್ನು ಸಿದ್ಧಪಡಿಸಿ ನಿಮಗೆ ಪದೋನ್ನತಿ
ನೀಡಬೇಕಾದುದು ಇಲಾಖಾ ಅಧಿಕಾರಿಗಳ
ಕರ್ತವ್ಯವಾಗಿರುತ್ತದೆ.
***
12-1-16
ನಾನೊಬ್ಬ ಸರ್ಕಾರಿ ನೌಕರನಾಗಿದ್ದು ಅಧಿಕ
ರಕ್ತದೊತ್ತಡದಿಂದ ಬಳಲುತ್ತಿದ್ದೇನೆ. ನನ್ನ ಹೆಂಡತಿಯೂ ಸಹ
ಮಧುಮೇಹ ಹಾಗೂ ರಕ್ತದ ಒತ್ತಡದಿಂದ ಬಳಲುತ್ತಿದ್ದು
ವೈದ್ಯಕೀಯ ಚಿಕಿತ್ಸೆ ಪಡೆಯಲು ನಿಯಮಾವಳಿಯಲ್ಲಿ
ಅವಕಾಶವಿದೆಯೇ?
|ಎನ್.ಎಂ. ಆಳಂದ ಅಬ್ಜಲ್​ಪುರ, ಕಲಬುರಗಿ
ಕರ್ನಾಟಕ ಸರ್ಕಾರಿ ಸೇವಾ (ವೈದ್ಯಕೀಯ ಚಿಕಿತ್ಸಾ)
ನಿಯಮಾವಳಿ 1963ರ ರೀತ್ಯ ನೀವು ಸರ್ಕಾರ ಗುರುತಿಸಿದ
ಆಸ್ಪತ್ರೆ ಅಥವಾ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆದು ಅದನ್ನು
ಜಿಲ್ಲಾ ಸರ್ಜನ್ ಅವರಿಂದ ಮೇಲು ಸಹಿ ಮಾಡಿಸಿ
ವೈದ್ಯಕೀಯ ಚಿಕಿತ್ಸಾ ವೆಚ್ಚದ ಮರುಪಾವತಿಯನ್ನು
ಪಡೆಯಬಹುದು.
***
13-1-16.
ಸರ್ಕಾರಿ ನೌಕರನು ಅನಾರೋಗ್ಯದ ನಿಮಿತ್ತ ತುರ್ತು
ಚಿಕಿತ್ಸೆಗಾಗಿ ವೈದ್ಯಕೀಯ ರಜೆ ಪಡೆಯಬೇಕಾದರೂ ರಜೆ
ಮಂಜೂರು ಮಾಡುವ ಅಧಿಕಾರಿಯ ಪೂರ್ವಾನುಮತಿ
ಪಡೆಯುವುದು ಕಡ್ಡಾಯವೇ? ಇಲ್ಲೋರ್ವ ಅಧಿಕಾರಿ
ಈ ರೀತಿ ಲಿಖಿತ ಸೂಚನೆ ನೀಡಿದ್ದಾರೆ. ಇದು ಸರಿಯಾದ
ಕ್ರಮವೇ?
|ಎಸ್.ಎನ್. ವರ್ಣೇಕರ್ ಸಪ್ತಾಪುರ, ಧಾರವಾಡ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 183ರಂತೆ
ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸಿ ರಜೆಯನ್ನು
ಪಡೆಯಬಹುದು. ಆದರೆ ಈ ನಿಯಮಾವಳಿಯಂತೆ
ಅನಾರೋಗ್ಯ ನಿಮಿತ್ತ ಪೂರ್ವಾನುಮತಿ ಪಡೆದು ರಜೆ ಅರ್ಜಿ
ಸಲ್ಲಿಸಿ ಮಂಜೂರಿ ಮಾಡಿಸಿಕೊಳ್ಳಬೇಕೆಂದು ಹೇಳುವ
ನಿಮ್ಮ ಮೇಲಧಿಕಾರಿಯ ಕ್ರಮ ನಿಯಮಬದ್ಧವಲ್ಲ.
***
14-1-16
ನಾನು ಈ ಹಿಂದೆ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ
ಉಪನ್ಯಾಸಕನಾಗಿದ್ದು, ಲೋಕಸೇವಾ ಆಯೋಗದ
ಮೂಲಕ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆಯಾಗಿ
ದಿನಾಂಕ 7.9.2009ರಿಂದ ಕರ್ತವ್ಯಕ್ಕೆ ಹಾಜರಾಗಿದ್ದೇನೆ.
ಇಲಾಖೆ ಅನುಮತಿ ಪಡೆದು ಆಯ್ಕೆಯಾಗಿದ್ದು ಹೊಸ ಹುದ್ದೆಗೆ
ಸೇರಿಕೆ ಕಾಲ ಅನ್ವಯವಾಗುತ್ತದೆಯೇ?
|ಟಿ. ದೀಪಕ್ ಕುಮಾರ್ ಸಹಾಯಕ ಪ್ರಾಧ್ಯಾಪಕರು,
ಮದ್ದೂರು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 76ರಿಂದ
90 ರವರೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆಯ ನಿಮಿತ್ತ
ಸೇರಿಕೆ ಕಾಲ ಅನ್ವಯವಾಗುತ್ತದೆ. ಆದರೆ ನೀವು ಹೊಸ
ಹುದ್ದೆಗೆ ನೇಮಕವಾಗಲು ಸ್ವ ಇಚ್ಛೆಯ ಮೂಲಕ ಅರ್ಜಿ
ಸಲ್ಲಿಸಿರುವುದರಿಂದ ನೀವು ಸರ್ಕಾರಿ ನೌಕರರಾಗಿದ್ದರೂ ಈ
ನಿಯಮಾವಳಿಯ ರೀತ್ಯ ಸೇರಿಕೆ ಕಾಲ
ಲಭ್ಯವಾಗುವುದಿಲ್ಲ. ನಿಮ್ಮ ಸೇವಾ ಅವಧಿಯನ್ನು ರಜೆ
ಸೌಲಭ್ಯ ಹಾಗೂ ನೂತನ ಪಿಂಚಣಿ ಯೋಜನೆಗೆ
ಪರಿಗಣಿಸಲಾಗುತ್ತದೆ.
***
15-1-16
ನಾನು ಮೊದಲ ಸರ್ಕಾರಿ ಹುದ್ದೆಗೆ ಸಿಂಧುತ್ವ
ಪ್ರಮಾಣಪತ್ರ ನೀಡಿ ಆಯ್ಕೆಯಾಗಿ, 10 ವರ್ಷ ಸೇವೆ
ಸಲ್ಲಿಸಿರುತ್ತೇನೆ. ಈಗ ಅದೇ ಇಲಾಖೆಯ ಇನ್ನೊಂದು
ಹುದ್ದೆಗೆ ಅನುಮತಿಯೊಂದಿಗೆ ನೇರ ನೇಮಕಾತಿಯಲ್ಲಿ
ಅದೇ ಮೀಸಲಾತಿಯಲ್ಲಿ ಆಯ್ಕೆಯಾಗಿದ್ದು ಮತ್ತೊಮ್ಮೆ
ಸಿಂಧುತ್ವ ಪ್ರಮಾಣಪತ್ರವನ್ನು ಮಾಡುವ ಅವಶ್ಯಕತೆ
ಇದೆಯೇ ?
| ಪವನ್ ಶಿಕ್ಷಕರು ಹೆಜ್.ಡಿ. ಕೋಟೆ, ಮೈಸೂರು
ಪರಿಶಿಷ್ಟ ಜಾತಿ , ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಗಳ
ಮೀಸಲಾತಿ ಅಧಿನಿಯಮ 1992ರಡಿಯಲ್ಲಿ ಹಿಂದುಳಿದ ವರ್ಗಗಳ
ಮೀಸಲಾತಿಯ ಸಿಂಧುತ್ವ ಪ್ರಮಾಣ ಪತ್ರವು 5
ವರ್ಷವಾಗಿದ್ದು, ಪರಿಶಿಷ್ಟ ಜಾತಿ/ವರ್ಗದ ಪ್ರಮಾಣ ಪತ್ರವು
ಶಾಶ್ವತವಾಗಿರುತ್ತವೆ. ಈ ಹಿನ್ನೆಲೆಯಲ್ಲಿ ನೀವು
ಮತ್ತೊಮ್ಮೆ ಹಿಂದುಳಿದ ವರ್ಗಕ್ಕೆ ಸೇರಿದ್ದರೆ ಸಿಂಧುತ್ವ
ಪ್ರಮಾಣ ಪತ್ರವನ್ನು ಕ್ರೀಮಿಲೇಯರ್ ದೃಷ್ಟಿಯಿಂದ
ಮಾಡಿಸುವುದು ಅವಶ್ಯಕವಾಗಿರುತ್ತದೆ.
***
16-1-16
ನನ್ನ ಮೇಲಧಿಕಾರಿಗಳ ಆದೇಶದ ಮೇಲೆ ನನ್ನ
ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಯ ಮಕ್ಕಳ
ನೇತ್ರ ತಪಾಸಣೆ ಮತ್ತು ಪ್ರಾಥಮಿಕ ಆರೋಗ್ಯ
ಕೇಂದ್ರಗಳಲ್ಲಿ ನೇತ್ರ ರೋಗಿಗಳ ಪರೀಕ್ಷೆ ಮಾಡಲು
ಹೋಗುತ್ತಿದ್ದು, ನನಗೆ 5 ವರ್ಷದಿಂದ ಯಾವುದೇ
ಪ್ರವಾಸ ಭತ್ಯೆ ಹಾಗೂ ದಿನಭತ್ಯೆ
ಸಂದಾಯವಾಗಿರುವುದಿಲ್ಲ. ಈ ಭತ್ಯೆಗಳನ್ನು
ಪಡೆದುಕೊಳ್ಳುವ ರೀತಿ ಹೇಗೆ?
ಬಸವರಾಜ್ ಎಸ್ ಚಿಕ್ಕೊಂಡ ನೇತ್ರಾಧಿಕಾರಿ,
ಬಸವನಬಾಗೇವಾಡಿ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 491ರಂತೆ
ಯಾರೇ ಸರ್ಕಾರಿ ನೌಕರನು ಕರ್ತವ್ಯದ ನಿಮಿತ್ತ ವ್ಯಾಪಕವಾಗಿ
ಪ್ರಯಾಣ ಮಾಡಬೇಕಾಗಿದೆಯೋ ಅಂತಹ ನೌಕರನಿಗೆ
ಖಾಯಂ ಮಾಸಿಕ ಪ್ರಯಾಣ ಭತ್ಯೆಯನ್ನು ಮಂಜೂರು
ಮಾಡಬಹುದೆಂದು ತಿಳಿಸಲಾಗಿದೆ. ಅಂಥ ಭತ್ಯೆಯನ್ನು
ಸರ್ಕಾರಿ ನೌಕರನ ಅಧಿಕಾರ ವ್ಯಾಪ್ತಿಯೊಳಗೆ ಕೈಗೊಳ್ಳುವ
ಪ್ರಯಾಣ ಭತ್ಯೆಯ ಬದಲಾಗಿ ಮಂಜೂರು
ಮಾಡಬಹುದಾಗಿದೆೆ ಹಾಗೂ ವರ್ಷ ಪೂರ್ತಿ
ಪಡೆಯಬಹುದಾಗಿದೆ. ಈ ಹಿನ್ನೆಲೆಯಲ್ಲಿ ನೀವು 494ರ
ಅಡಿಯಲ್ಲಿ ಮಾಸಿಕ ಪ್ರಯಾಣ ಭತ್ಯೆಯೊಂದಿಗೆ ಹೆಚ್ಚಿನ
ದಿನಭತ್ಯವನ್ನು ಸಹ ಪಡೆಯಬಹುದು.
***
17-1-16
ನಾನು ಸರ್ಕಾರಿ ನೌಕರನಾಗಿದ್ದು, ನಮಗೆ ಇನ್ನೂ ಮಗುವಾಗದೆ
ಇರುವುದರಿಂದ ನನ್ನ ಸಹೋದರನು ತನ್ನ ಮಗುವನ್ನು
ದತ್ತುಕೊಡಲು ಒಪ್ಪಿದ್ದಾನೆ. ಬರುವ ಫೆಬ್ರವರಿ ಮೊದಲನೇ
ವಾರದಲ್ಲಿ ಡೆಲಿವರಿ ಸಮಯದಲ್ಲಿ ಅವರು ದತ್ತು ನೀಡುತ್ತಾರೆ.
ನಾವು ಮಗುವನ್ನು ದತ್ತು ತೆಗೆದುಕೊಳ್ಳುವುದು ಹೇಗೆ?
ನನ್ನ ಸೇವಾ ಪುಸ್ತಕದಲ್ಲಿ ನಾಮ ನಿರ್ದೇಶನ ಹೇಗೆ
ಮಾಡಿಸಬೇಕು? ಮಾಹಿತಿ ನೀಡಿ.
| ಹೆಸರು ಮತ್ತು ಊರು ಬೇಡ
ಹಿಂದು ದತ್ತಕ ಕಾಯ್ದೆ ಅಡಿಯಲ್ಲಿ ನೀವು ಮಗುವನ್ನು
ದತ್ತು ತೆಗೆದುಕೊಳ್ಳಬೇಕು. ದತ್ತು ತೆಗೆದುಕೊಂಡ
ಮಗುವನ್ನು ನೋಂದಣಿ ಮಾಡಿಸಿ ಕರ್ನಾಟಕ ಸರ್ಕಾರಿ
ಸೇವಾ ನಿಯಮಾವಳಿಯ ನಿಯಮ 302ರಂತೆ ನಿಮ್ಮ ದತ್ತಕ
ಮಗುವನ್ನು ನಾಮ ನಿರ್ದೇಶನ ಮಾಡಿಸಬೇಕು. ಆಗ ನಿಮ್ಮ
ಸ್ವಂತ ಮಗುವಿಗೆ ದೊರಕುವಂತೆ ಎಲ್ಲಾ ಸರ್ಕಾರಿ
ಸೌಲಭ್ಯಗಳು ಈ ಮಗುವಿಗೂ ಸಹ ದೊರಕುತ್ತದೆ.
***
18-1-16
ನಾನು ವಿದ್ಯಾ ಇಲಾಖೆಯಲ್ಲಿ ಸೇವೆಗೆ ಸೇರಿ
ವಯೋನಿವೃತ್ತಿ ಹೊಂದಿದ್ದು, ನನ್ನ ಪತಿ ಸಹ ಆರೋಗ್ಯ
ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ನಿಧನ
ಹೊಂದಿದ್ದಾರೆ. ಅಂದಿನಿಂದ ನಾನು ಕುಟುಂಬ ನಿವೃತ್ತಿ
ವೇತನವನ್ನು ಪಡೆಯುತ್ತಿದ್ದೇನೆ. ನನ್ನ ಮಗನಿಗೆ ಆರೋಗ್ಯ
ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ
ನೇಮಕವಾಗಿದ್ದು ನನ್ನ ಮತ್ತು ನನ್ನ ಪತಿಯ ಕುಟುಂಬ
ವೇತನವನ್ನು ಪಡೆಯುತ್ತಿರುವುದರಿಂದ ಅನುಕಂಪದ ಮೇಲೆ
ನೇಮಕವಾದ ನನ್ನ ಮಗನಿಗೆ ಮುಂದೆ ಕಾನೂನಿನ ತೊಡಕು
ಎದುರಾಗಬಹುದೇ? ದಯವಿಟ್ಟು ತಿಳಿಸಿ.
ಬಿ. ಶಕುಂತಲಾದೇವಿ ರಾಜಾಜಿನಗರ, ಬೆಂಗಳೂರು
2002ರ ಕುಟುಂಬ ನಿವೃತ್ತಿ ವೇತನ ನಿಯಮಾವಳಿಯ ರೀತ್ಯ
ಪತಿ, ಪತ್ನಿ ಇಬ್ಬರಿಗೂ ಸಂದಾಯವಾಗಬೇಕಾದ ಕುಟುಂಬ
ವೇತನವನ್ನು ನೀವು ಪಡೆಯುತ್ತಿದ್ದರೂ ಅನುಕಂಪದ
ಮೇಲೆ ನೇಮಕವಾದ ನಿಮ್ಮ ಮಗನ ಭವಿಷ್ಯದ ದೃಷ್ಟಿಯಿಂದ
ಯಾವುದೇ ತೊಡಕು ಉಂಟಾಗುವುದಿಲ್ಲ.ದ
***
19-1-16
ನಮ್ಮ ತಂದೆ ತಾಯಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು
2008ರಲ್ಲಿ ನಮ್ಮ ತಂದೆಯವರು ನಿಧನರಾಗಿದ್ದಾರೆ. ಆಗ ನನ್ನ
ವಯಸ್ಸು 15 ವರ್ಷ 8 ತಿಂಗಳು ಆಗಿದ್ದು, ಅನುಕಂಪದ
ನೇಮಕಾತಿಗಾಗಿ ಅರ್ಜಿಯನ್ನು ಸಲ್ಲಿಸಿದ್ದೆ. ನನ್ನ
ತಾಯಿಯವರಿಗೆ ಕುಟುಂಬ ಪಿಂಚಣಿ ಸೌಲಭ್ಯ ದೊರಕುತ್ತಿದೆ.
ನನಗೀಗ ಮದುವೆಯಾಗಿದ್ದು ನಾನು ಅನುಕಂಪದ ಆಧಾರದ
ಮೇಲೆ ನೇಮಕಾತಿಗೆ ಅರ್ಹಳಾಗಿರುತ್ತೇನೆಯೇ?
ರಮ್ಯ ಎಸ್.ಎನ್. ಗೌರಿಬಿದನೂರು, ಚಿಕ್ಕಬಳ್ಳಾಪುರ
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇಲೆ
ನೇಮಕಾತಿ) ನಿಯಮಾವಳಿ ರೀತ್ಯ ಅನುಕಂಪದ ಮೇಲೆ
ನೇಮಕಗೊಳ್ಳಲು ಬಯಸುವ ಮರಣ ಹೊಂದಿದ ಸರ್ಕಾರಿ
ನೌಕರನ ಅವಲಂಬಿತ ಮಕ್ಕಳು ನಿಧನ ಹೊಂದಿದ 1 ವರ್ಷದೊಳಗೆ
18 ವರ್ಷ ಪೂರ್ಣಗೊಳ್ಳುವಂತಿದ್ದರೆ ಅಂಥವರು ಮಾತ್ರ
ಅನುಕಂಪದ ಮೇಲೆ ನೇಮಕಕ್ಕೆ ಅರ್ಹರು. ಈ ಹಿನ್ನೆಲೆಯಲ್ಲಿ
ನೀವು ವಿವಾಹವಾಗಿರುವುದರಿಂದ ಈಗ ಅನುಕಂಪದ ಮೇಲೆ
ನೇಮಕಗೊಳ್ಳಲು ಅವಕಾಶವಿರುವುದಿಲ್ಲ.
***
20-1-16.
ಹಿಂದಿನ ಕ್ಷೇತ್ರ ಶಿಕ್ಷಣಾಧಿಕಾರಿಯವರ ಸಹಿ ಅವಶ್ಯಕವೇ?
ನನ್ನ ಸೇವಾ ಪುಸ್ತಕವು ಇತ್ತೀಚೆಗೆ ಕಳೆದುಹೋಗಿದ್ದು
ಹೊಸ ಸೇವಾ ಪುಸ್ತಕ ಮಾಡಲು ಬರುತ್ತದೆಯೇ?
ಬರುವಂತಿದ್ದರೆ ಹೊಸ ಸೇವಾ ಪುಸ್ತಕಕ್ಕೆ ಹಿಂದಿನ ಕ್ಷೇತ್ರ
ಶಿಕ್ಷಣಾಧಿಕಾರಿಯವರ ಸಹಿ ಅವಶ್ಯಕವೇ? | ಪ್ರಶಾಂತ್
ಕಣ್ಣೂರು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 397ರಂತೆ
ಸೇವಾ ಪುಸ್ತಕವನ್ನು ನಿರ್ವಹಿಸಬೇಕಾಗಿದ್ದು, ಅದರಂತೆ
ನಕಲು ಸೇವಾ ಪುಸ್ತಕವನ್ನು ಪ್ರತಿಯೊಬ್ಬ ನೌಕರನಿಗೂ
ನೀಡಬೇಕಾಗಿರುವುದು ಕಚೇರಿಯ ಮುಖ್ಯಾಧಿಕಾರಿಯ
ಕರ್ತವ್ಯವಾಗಿರುತ್ತದೆ. ನಿಯಮ 415(2)ರಲ್ಲಿ ಮೂಲ ಸೇವಾ
ಪುಸ್ತಕ ಕಳೆದು ಹೋದರೆ ದ್ವಿಪ್ರತಿ ಪುಸ್ತಕವನ್ನು ಸಕ್ಷಮ
ಪ್ರಾಧಿಕಾರಿಯು ಸಿದ್ಧಪಡಿಸಬೇಕು. ಇದಕ್ಕೆ ಹಿಂದಿನ ಕ್ಷೇತ್ರ
ಶಿಕ್ಷಣಾಧಿಕಾರಿಯವರ ಸಹಿ ಬೇಕಾಗುವುದಿಲ್ಲ.
***
21-1-16.
ನಾನು 30.4.2011ರಂದು ಪದೋನ್ನತಿ ಹೊಂದಿ
ಕುಂದಾಪುರದಿಂದ ಉಡುಪಿ ನ್ಯಾಯಾಲಯಕ್ಕೆ ಕೆಲಸಕ್ಕೆ
ಹಾಜರಾಗಿದ್ದು ನನಗೆ ವರ್ಗಾವಣೆ ಅನುದಾನ ನೀಡಲು ಅರ್ಜಿ
ಸಲ್ಲಿಸಿದ್ದೇನೆ. ಆದರೆ ಈಗ ವರ್ಗಾವಣೆ ಅನುದಾನವನ್ನು
ಖಜಾನೆಯವರು ತಿರಸ್ಕರಿಸಿದ್ದಾರೆ. ಇದಕ್ಕೆ ಪರಿಹಾರ ತಿಳಿಸಿ.
| ದಿವಾಕರ್​ರಾವ್ ನಿವೃತ್ತ ಶಿರಸ್ತೇದಾರ್, ಉಡುಪಿ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 539ಎ
(1)ರ ರೀತ್ಯ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ
ಸಾರ್ವಜನಿಕ ಹಿತಾಸಕ್ತಿಯಿಂದ ವರ್ಗಾವಣೆಗೊಂಡರೆ
ಅಂಥವರಿಗೆ ಈ ವರ್ಗಾವಣಾ ಅನುದಾನವನ್ನು
ನೀಡಬೇಕೆಂದು ಸೂಚಿಸುತ್ತದೆ. ಆದರೆ ಒಂದೇ ಊರಿನ
ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಸಾರ್ವಜನಿಕ
ಹಿತಾಸಕ್ತಿಯಿಂದ ವರ್ಗಾವಣೆಯಾದರೆ ಅವರಿಗೆ ಯಾವ
ಅನುದಾನವೂ ದೊರಕುವುದಿಲ್ಲ. ಆದ ಕಾರಣ ನಿಮಗೆ ಈ
ನಿಯಮಾವಳಿರೀತ್ಯ ವರ್ಗಾವಣೆ ಅನುದಾನ
ಲಭ್ಯವಾಗುತ್ತದೆ.
***
22-1-16.
ಸಿಸಿಎ ನಿಯಮಾವಳಿ ಪ್ರಕಾರ ದಂಡನೆ ವಿಧಿಸುವ ಸಾಧ್ಯತೆ
ಇದೆಯೇ?
ನಾನು ವೃತ್ತಿಯಲ್ಲಿ ಶಿಕ್ಷಕನಾಗಿದ್ದು, ಈ ಹಿಂದೆ ನನ್ನ
ಸಹೋದ್ಯೋಗಿ ಶಿಕ್ಷಕಿಯೊಬ್ಬಳು ಚೀಟಿ ಹಣ
ಕೇಳಿದ್ದಕ್ಕೆ ನನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಲೈಂಗಿಕ
ಕಿರುಕುಳದ ಸುಳ್ಳು ದೂರನ್ನು ದಾಖಲಿಸಿದ್ದಳು. ಅದರ
ಆಧಾರದ ಮೇಲೆ ನನ್ನ ವಿರುದ್ಧ ಐಪಿಸಿ 509ರ ಅಡಿಯಲ್ಲಿ ಎಫ್​
ಐಆರ್ ದಾಖಲಾಗಿ 7 ವರ್ಷಗಳ ವಿಚಾರಣೆ ನಂತರ
ನ್ಯಾಯಾಲಯವು 2000 ರೂ. ದಂಡ ವಿಧಿಸಿದೆ. ಈ
ಹಿನ್ನೆಲೆಯಲ್ಲಿ ನನಗೆ ಶಿಕ್ಷಣ ಇಲಾಖೆಯಲ್ಲಿ ಸಿಸಿಎ ನಿಯಮಾವಳಿ
ಪ್ರಕಾರ ದಂಡನೆ ವಿಧಿಸುವ ಸಾಧ್ಯತೆ ಇದೆಯೇ?
| ತಮ್ಮಣ್ಣ ಮೈಸೂರು
ಕರ್ನಾಟಕ ಸರ್ಕಾರಿ (ಸೇವಾ) ನಿಯಮಗಳು 1966ರ ನಿಯಮ 21
(4) (ಜಿ) (ಬಿ)ರಡಿಯಲ್ಲಿ ಸರ್ಕಾರಿ ನೌಕರ ಅಥವಾ ಆತನ
ಕುಟುಂಬದ ಸದಸ್ಯರು ಬಡ್ಡಿ ವ್ಯವಹಾರ ಅಥವಾ ಚೀಟಿ
ವ್ಯವಹಾರ ನಡೆಸುವುದನ್ನು ಪ್ರತಿಬಂಧಿಸುತ್ತದೆ.
ಹೀಗಿರುವಾಗ ನೀವು ಈ ರೀತಿ ಚೀಟಿ ವ್ಯವಹಾರವನ್ನು
ನಿರ್ವಹಿಸಿರುವುದರಿಂದ ಸಿಸಿಎ ನಿಯಮಾವಳಿಯ ರೀತ್ಯ ನಿಮಗೆ
ಕಾಲ ವೇತನ ಶ್ರೇಣಿಯಿಂದ ಕೆಳಗಿನ ಹಂತಕ್ಕೆ ಇಳಿಸಬಹುದು
ಅಥವಾ ದಿನಾಂಕ 14-9-2001ರ ಸರ್ಕಾರಿ ಸುತ್ತೋಲೆಯಲ್ಲಿ
ನಿಗದಿಪಡಿಸಿರುವ ಯಾವುದಾದರೊಂದು ದಂಡನೆಯನ್ನು
ಶಿಸ್ತು ಪ್ರಾಧಿಕಾರ ವಿಧಿಸಬಹುದು.
***
23-1-16
ಅನುಕಂಪದ ಮೇಲೆ ಉದ್ಯೋಗ ಪಡೆಯಬಹುದೇ ?
ನಮ್ಮ ಪೋಷಕರು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿದ್ದು,
ನಮ್ಮ ತಾಯಿಯವರು 7 ವರ್ಷಗಳ ಹಿಂದೆ ನಿಧನರಾಗಿದ್ದಾರೆ.
ಅದರ ಹಿನ್ನೆಲೆಯಲ್ಲಿ ನನ್ನ ಸಹೋದರನಿಗೆ ಅನುಕಂಪದ ಮೇಲೆ
ನೌಕರಿ ಸಿಕ್ಕಿರುತ್ತದೆ ಮತ್ತು ಅವನ ವಿವಾಹವಾಗಿರುತ್ತದೆ. ನನ್ನ
ತಂದೆಯವರು 1 ವರ್ಷದ ಕೆಳಗಡೆ ಸೇವೆಯಲ್ಲಿರುವಾಗಲೇ
ನಿಧನ ಹೊಂದಿದ್ದು, ನಾನು ಅನುಕಂಪದ ಮೇಲೆ
ಉದ್ಯೋಗ ಪಡೆಯಲು ಅರ್ಹನೇ?
| ಸುಮೇಘ ರಾಜ್
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇಲೆ ನೇಮಕ)
ನಿಯಮಾವಳಿಯ 1996ರ ಅಡಿಯಲ್ಲಿ ನೀವು ನಿಮ್ಮ
ತಂದೆಯವರ ನಿಧನ ಪ್ರಯುಕ್ತ ನಿಮಗೆ 18 ವರ್ಷ
ಪೂರ್ಣವಾಗಿದ್ದರೆ ನಿಧನದ ದಿನಾಂಕದಿಂದ 1 ವರ್ಷದೊಳಗೆ
ಅನುಕಂಪದ ಮೇರೆಗೆ ನೇಮಕಗೊಳ್ಳಲು ಸಕ್ಷಮ
ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಬಹುದು. ಈ
ಹಿನ್ನೆಲೆಯಲ್ಲಿ ನೀವು ಅನುಕಂಪದ ಆಧಾರಕ್ಕೆ
ಅರ್ಹರಾಗಿರುತ್ತೀರಿ.
***
24-1-16
ವಿಶೇಷ ವೇತನ ಬಡ್ತಿ ದೊರಕುತ್ತದೆಯೇ ?
ನಾನು ಕುಟುಂಬ ಯೋಜನಾ ಕ್ರಮಗಳನ್ನು
ಅನುಸರಿಸಿಕೊಂಡು ಬಂದು 2 ಮಕ್ಕಳ ನಂತರ 2015ರಲ್ಲಿ
ನನ್ನ ಪತ್ನಿಗೆ ಸಂತಾನ ಹರಣ ಚಿಕಿತ್ಸೆ ಮಾಡಿಸಿರುತ್ತೇನೆ. ನನಗೆ
ಈಗ ಎಷ್ಟು ವಿಶೇಷ ವೇತನ ಬಡ್ತಿ ದೊರಕುತ್ತದೆ?
| ಲೋಕೇಶ್ ಕಂದಾಯ ಇಲಾಖೆ, ಕುಣಿಗಲ್ ತಾಲೂಕು
ದಿನಾಂಕ 1.10.1985ರ (ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 27,
ಎಸ್​ಆರ್i​ಎಸ್ 85) ಸರ್ಕಾರಿ ಆದೇಶದಂತೆ ವೈಯಕ್ತಿಕ ವೇತನ
ರೂಪದಲ್ಲಿ ನೀಡುವ ಈ ವಿಶೇಷ ವೇತನ ಬಡ್ತಿಯ ದರವು
ಮುಂದೆ ಮಂಜೂರಾಗುವ ವೇತನ ಬಡ್ತಿಗೆ ಸಮನಾಗಿದ್ದು
ಇಡೀ ಸೇವಾ ಅವಧಿಗೆ ನಿಗದಿ ಪಡಿಸಬೇಕು ಎಂದು
ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿಮಗೆ ಪ್ರಸ್ತುತ ವೇತನ
ಶ್ರೇಣಿಯಲ್ಲಿನ ಭವಿಷ್ಯದ ವಾರ್ಷಿಕ ವೇತನ ಬಡ್ತಿ ರೂ. 350
ಆಗಿರುವುದರಿಂದ ನಿಮಗೆ ಇದನ್ನೇ ವಿಶೇಷ ವೇತನ
ಬಡ್ತಿಯಾಗಿ ನೀಡಬೇಕಾಗುತ್ತದೆ.
***
25-1-16.
ರಜೆ ತೆಗೆದುಕೊಳ್ಳಬಹುದೇ?
15 ದಿನಗಳ ಪಿತೃತ್ವ ರಜೆಯನ್ನು ಹೆರಿಗೆ ಆದ ದಿನದಿಂದ
ತೆಗೆದುಕೊಳ್ಳಬಹುದೇ? ಅಥವಾ ಮಾತೃತ್ವ ರಜೆಯ 6
ತಿಂಗಳೊಳಗೆ ಯಾವಾಗಲಾದರೂ ತೆಗೆದುಕೊಳ್ಳಬಹುದೇ?
| ಜಂಬುನಾಥ ಬೆಂತೂರ, ಜಗಳೂರು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 35ಬಿ
ಅಡಿಯಲ್ಲಿ ಪತ್ನಿಗೆ ಹೆರಿಗೆ ಪ್ರಾರಂಭದಲ್ಲಿ 15 ದಿನಗಳ ಕಾಲ
ಪಿತೃತ್ವ ರಜೆಯನ್ನು ಮಂಜೂರು ಮಾಡಲಾಗುತ್ತದೆ.
ಹೀಗಿರುವುದರಿಂದ ನೀವು ಆರಂಭದಲ್ಲಿಯೇ ಈ ರಜೆ
ಬಳಸಿಕೊಳ್ಳಬೇಕೇ ವಿನಃ ನಿಮ್ಮ ಪತ್ನಿಯ ಹೆರಿಗೆ ರಜೆಯ 6
ತಿಂಗಳೊಳಗೆ ಯಾವಾಗಲಾದರೂ ತೆಗೆದುಕೊಳ್ಳಲು
ಬರುವುದಿಲ್ಲ.
***
26-1-16.
ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿ 23 ವರ್ಷ ಸೇವೆ
ಸಲ್ಲಿಸಿದ್ದು ಪ್ರಸ್ತುತ ಈ ಉದ್ಯೋಗದಲ್ಲಿ
ಮುಂದುವರಿಯಲು ಇಷ್ಟವಿರುವುದಿಲ್ಲ. ಬೇರೆ
ಯಾವುದಾದರೂ ಇಲಾಖೆಯಲ್ಲಿ ಕೆಲಸ ಸಿಗಬಹುದೇ?
ಅಥವಾ ನಿಯೋಜನೆಯ ಮೇರೆಗೆ ಹೋಗಬಹುದೇ?
| ಪ್ರಭಾಕರ ತೀರ್ಥಹಳ್ಳಿ
ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ)
ನಿಯಮಾವಳಿ 1977ರ ರೀತ್ಯ ಸರ್ಕಾರಿ ನೌಕರರು ಬೇರೆ
ಇಲಾಖೆಗಳಿಗೆ ತನ್ನ ತತ್ಸಮಾನ ವೇತನ ಶ್ರೇಣಿಯ ಮತ್ತು
ವೃಂದದ ಹುದ್ದೆಗಳಿಗೆ ನಿಯೋಜನೆ ಮೇರೆಗೆ
ಹೋಗಬಹುದು. ಅಲ್ಲದೆ ಸರ್ಕಾರಿ ನೌಕರನಿಗೆ ಗರಿಷ್ಠ
ವಯೋಮಿತಿಯಲ್ಲಿ ಅವನು ಸಲ್ಲಿಸಿದ ಸೇವಾವಧಿ ಅಥವಾ
ಗರಿಷ್ಠ 10 ವರ್ಷಗಳ ಕಾಲ ವಿನಾಯಿತಿ ದೊರಕುವುದರಿಂದ
ಬೇರೆ ಕೆಲಸಕ್ಕೆ ಹೋಗಬಹುದು.
***
27-1-16.
ನಾನು 13 ವರ್ಷಗಳಿಂದ ಶಾಲಾ ಶಿಕ್ಷಕಿಯಾಗಿದ್ದು, ನನ್ನ
2ನೇ ಮಗಳು ಶೇ. 90ಕ್ಕಿಂತ ಹೆಚ್ಚು
ಬುದ್ಧಿಮಾಂಧ್ಯತೆಯಿಂದ ಬಳಲುತ್ತಿದ್ದಾಳೆ. ಅವಳ ಪಾಲನೆಗೆ
ಜಿಲ್ಲಾ ವೈದ್ಯಾಧಿಕಾರಿಯಿಂದ ಅಂಗವಿಕಲ ಪ್ರಮಾಣಪತ್ರ
ಪಡೆದು ರಜೆ ಅರ್ಜಿಯನ್ನು ಸಲ್ಲಿಸಿದಾಗ ಕ್ಷೇತ್ರ
ಶಿಕ್ಷಣಾಧಿಕಾರಿ ತಿರಸ್ಕರಿಸಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ
ತಿಳಿಸಿ?
| ಶ್ರೀಮತಿ ಹರಿಕೃಷ್ಣ ಹಂಚತೆ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ
135(ಸಿ)ರಂತೆ ಮಹಿಳಾ ಸರ್ಕಾರಿ ನೌಕರರಿಗೆ ಇಡೀ ಸೇವಾ
ಅವಧಿಯಲ್ಲಿ 730 ದಿನಗಳ ಕಾಲ ಶಿಶುಪಾಲನಾ ರಜೆಯನ್ನು
ಪಡೆಯಲು ಅವಕಾಶವಿರುತ್ತದೆ. ಈ ರಜೆ ಮಂಜೂರು ಮಾಡಲು
ವೈದ್ಯಕೀಯ ಮೂಲ ಪ್ರಮಾಣಪತ್ರವನ್ನು
ವೈದ್ಯಕೀಯ ಮಂಡಳಿಯು ದೃಢೀಕರಿಸಿ,
ಬುದ್ಧಿಮಾಂಧ್ಯತೆಯಿಂದ ಗುಣವಾಗುವ ಸಾಧ್ಯತೆ
ಕಡಿಮೆಯೆಂದು ಪ್ರಮಾಣೀಕರಿಸಿದರೆ ವರ್ಷಕ್ಕೆ 15 ದಿನಕ್ಕಿಂತ
ಕಡಿಮೆ ಇಲ್ಲದಂತೆ ಮೂರು ಬಾರಿ ಮಂಜೂರು
ಮಾಡಬಹುದು. ಆದ ಕಾರಣ ನೀವು ವೈದ್ಯಕೀಯ
ಮಂಡಳಿಯಿಂದ ನಿಮ್ಮ ಪ್ರಮಾಣಪತ್ರವನ್ನು ದೃಢೀಕರಿಸಿದರೆ
ಶಿಶುಪಾಲನಾ ರಜೆ ನಿಯಮಾವಳಿ ರೀತ್ಯ ನಿಮಗೆ ರಜೆ
ಲಭ್ಯವಾಗುತ್ತದೆ.
***
28-1-16.
ಅನುಕಂಪದ ಆಧಾರದ ಮೇಲೆ ನೇಮಕಾತಿ ಹೊಂದಿ 2 ವರ್ಷದ
ನಂತರ ಮದುವೆಯಾಗದೆ ಮರಣ ಹೊಂದಿರುವ ನೌಕರನ ತಂಗಿಗೆ
ಅಥವಾ ನೌಕರನ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ
ನೌಕರಿ ದೊರೆಯಬಹುದೇ?
| ಪ್ರಕಾಶ್ ಎಸ್. ಗುಮ್ಮಗೋಳ, ಧಾರವಾಡ
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ ಮೇಲೆ
ನೇಮಕ) ನಿಯಮಾವಳಿಯ ರೀತ್ಯ ಸರ್ಕಾರಿ ನೌಕರನ ಅವಿವಾಹಿತ
ಸಹೋದರಿಗೆ ಅಥವಾ ಸಹೋದರನಿಗೆ ಈ ಅನುಕಂಪದ
ಆಧಾರದ ಮೇಲೆ ನೌಕರಿ ದೊರಕುತ್ತದೆ.
***
29-1-16.
ಸೌಲಭ್ಯಕ್ಕಾಗಿ ನ್ಯಾಯಾಲಯಕ್ಕೆ ಹೋಗಬಹುದೇ?
ನಾನು ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ
ಪದೋನ್ನತಿ ನೀಡಲು ತಯಾರಿಸಿದ ಪಟ್ಟಿಯಲ್ಲಿ
ಜ್ಯೇಷ್ಠತೆಯಲ್ಲಿ ಹಿರಿಯನಾಗಿದ್ದು, ಪದೋನ್ನತಿ ನೀಡುವ
ಸಮಯದಲ್ಲಿ ನನ್ನ ಮೇಲೆ ಬೇನಾಮಿ ಹೆಸರಲ್ಲಿ ಒಂದು
ಸಾರ್ವಜನಿಕ ಪುಕಾರು ಅರ್ಜಿ ಇತ್ತೇ ವಿನಃ ಇಲಾಖಾ
ವಿಚಾರಣೆಯಾಗಲೀ, ಕ್ರಿಮಿನಲ್ ಮೊಕದ್ದಮೆಯಾಗಲಿ
ಇರಲಿಲ್ಲ. ಇದರ ಆಧಾರದ ಮೇಲೆ ನನಗೆ ಪದೋನ್ನತಿ
ತಡೆಹಿಡಿದರು. ಈಗ ನನಗೀಗಿರುವ ಸೌಲಭ್ಯಕ್ಕೂ ನನ್ನ
ಸ್ನೇಹಿತರು ಪಡೆಯುತ್ತಿರುವ ಸೌಲಭ್ಯಕ್ಕೂ ಬಹಳ
ವ್ಯತ್ಯಾಸವಿರುತ್ತದೆ. ಈ ಬಗ್ಗೆ ನಾನು ನ್ಯಾಯಾಲಯಕ್ಕೆ
ಹೋಗಬಹುದೇ? ನನ್ನ ಪರವಾಗಿ ತೀರ್ಪು ಬರುವುದೇ?
ದಯವಿಟ್ಟು ಪರಿಹಾರ ಸೂಚಿಸಿ.
| ಬಿ.ಎನ್. ರಾಜಪ್ಪ, ಪಂಚಾಯಿತಿ ಕಾರ್ಯದರ್ಶಿ, (ಗ್ರೇಡ್ 1)
ಮಡಿಕೇರಿ
ಕರ್ನಾಟಕ ಸರ್ಕಾರಿ ಸೇವಾ (ಸಿಸಿಎ) ನಿಯಮಾವಳಿ 1957ರ
ನಿಯಮ 11 (4), ನಿಯಮ 12 (1) (ಎ) ಅಥವಾ ನಿಯಮ 12 (1) (ಬಿ)
ಅಡಿ ನೋಟಿಸ್ ಜಾರಿಯಾಗದ ಹೊರತು ಅವನು
ಪದೋನ್ನತಿಗೆ ಅರ್ಹನಾಗಿರುತ್ತಾನೆ. ಈ ಸಂಬಂಧವಾಗಿ
14.7.1993ರಲ್ಲಿ ಸರ್ಕಾರದ ಅಧಿಕೃತ ಜ್ಞಾಪನದಲ್ಲಿ
ಸ್ಪಷ್ಟವಾದ ಸೂಚನೆಗಳನ್ನು ನೀಡಲಾಗಿದೆ.
ಹೀಗಿರುವುದರಿಂದ ನೀವು ಪದೋನ್ನತಿಗೆ ಅರ್ಹರಾಗಿದ್ದು
ನ್ಯಾಯಾಲಯದಲ್ಲಿ ನೀವು ಪ್ರಶ್ನಿಸಿದರೆ ನಿಮ್ಮ ಪರವಾಗಿ
ತೀರ್ಪು ಬರುವುದು ಖಚಿತವಾಗಿರುತ್ತದೆ. ನಂತರ ನಿಮಗೆ
ಎಲ್ಲಾ ಸೇವಾ ಸೌಲಭ್ಯಗಳು ಲಭ್ಯವಾಗುತ್ತವೆ.
***
30-1-16.
ವೇತನ ರಕ್ಷಣೆ ದೊರಕುತ್ತದೆಯೇ ?
ನಾನು 2009ರಲ್ಲಿ ಪೊಲೀಸ್ ಪೇದೆಯಾಗಿ ಸೇವೆಗೆ ಸೇರಿ
ಇಲಾಖೆಯಿಂದ ಅನುಮತಿ ಪಡೆದು ಇತ್ತೀಚೆಗೆ ಪ್ರಾಥಮಿಕ
ಶಾಲಾ ಶಿಕ್ಷಕನಾಗಿ ಆಯ್ಕೆಯಾಗಿರುತ್ತೇನೆ. ನನ್ನ ಮೂಲ
ವೇತನ ಪ್ರಸ್ತುತ ರೂ. 13,900 ಆಗಿದ್ದು, ನಾನು
ಆಯ್ಕೆಯಾಗಿರುವ ಶಿಕ್ಷಕ ಹುದ್ದೆಯ ಮೂಲ ವೇತನ ರೂ.
13,600 ಆಗಿರುತ್ತದೆ. ಒಂದು ವೇಳೆ ನಾನು ಶಿಕ್ಷಕ ಹುದ್ದೆಗೆ
ಸೇರಿದರೆ ವೇತನ ರಕ್ಷಣೆ ದೊರಕುತ್ತದೆಯೇ ?
| ಆರ್. ಚಂದ್ರಶೇಖರ್ ಚಿತ್ರದುರ್ಗ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 41 ಎ
ರೀತ್ಯ, ಹೆಚ್ಚಿನ ವೇತನ ಶ್ರೇಣಿಯಾಗಿದ್ದರೆ ಸರ್ಕಾರಿ ನೌಕರನು
ಈ ಹಿಂದೆ ಪಡೆಯುತ್ತಿದ್ದ ಮೂಲ ವೇತನಕ್ಕೆ ಸಮನಾದ ಹಂತಕ್ಕೆ
ವೇತನವನ್ನು ನಿಗದಿಪಡಿಸತಕ್ಕದ್ದು ಎಂದು ಹೇಳಲಾಗಿದೆ. ಆದ
ಕಾರಣ ನೀವು ಪೊಲೀಸ್ ಇಲಾಖೆಯಲ್ಲಿ ಪಡೆಯುತ್ತಿದ್ದ
ಮೂಲ ವೇತನವನ್ನೇ ಶಾಲಾ ಶಿಕ್ಷಕರಾಗಿ ನೇಮಕವಾದರೆ
ಮುಂದುವರಿಸಲಾಗುವುದು.
***
31-1-16.
ವೈದ್ಯಕೀಯ ವೆಚ್ಚ ಮರು ಪಾವತಿ ಪಡೆಯಲು
ಅವಕಾಶವಿದೆಯೇ?
ನಾನು ರಾಜ್ಯ ಸರ್ಕಾರದ ನೌಕರನಾಗಿ ಸೇವೆ
ಸಲ್ಲಿಸುತ್ತಿದ್ದೇನೆ. ನನ್ನ ಹೆಂಡತಿ ಗಂಡು ಮಗುವಿಗೆ ಜನ್ಮ
ನೀಡಿದ್ದು, ಮಗುವು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದೆ.
ಸದರಿ ಆಸ್ಪತ್ರೆಯು ಸರ್ಕಾರದ ಮಾನ್ಯತೆ ಪಡೆದಿರುತ್ತದೆ. ಈಗ
ನಾನು ವೈದ್ಯಕೀಯ ವೆಚ್ಚ ಮರು ಪಾವತಿ ಪಡೆಯಲು
ಅವಕಾಶವಿದೆಯೇ?
| ಹರ್ಷ ಸಿ.ಪಿ.
1963ರ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಚಿಕಿತ್ಸಾ)
ನಿಯಮಾವಳಿ ರೀತ್ಯ ನೀವು ಮಗುವಿಗೆ ಚಿಕಿತ್ಸೆ ಕೊಡಿಸಿ ಸದರಿ
ಆಸ್ಪತ್ರೆಯ ಅವಶ್ಯಕತಾ ಪ್ರಮಾಣಪತ್ರವನ್ನು ಪಡೆದು
ವೈದ್ಯಕೀಯ ವೆಚ್ಚವನ್ನು ಪಡೆಯಬಹುದು.

No comments:

Post a Comment