Sunday, 11 September 2016

Sarkari corner

Basayya Jamalur Kalabhavi
ಫೆಬ್ರುವರಿ-2016 ರ ಸರ್ಕಾರಿ ಕಾರ್ನರ್
ಪ್ರಶ್ನೆಗಳು
February 1, 2016 ಸರ್ಕಾರಿ ಕಾರ್ನರ್
ಸರ್ಕಾರಿ ಕಾರ್ನರ್- ನೌಕರಿ ಕಿರಿಕಿರಿಗೆ ಪರಿಹಾರ.
ಕೃಪೆ: ವಿಜಯವಾಣಿ ದಿನಪತ್ರಿಕೆ.
ರಜೆ, ಭತ್ಯೆ, ವೇತನ ತಾರತಮ್ಯ, ದೈಹಿಕ, ಮಾನಸಿಕ ಕಿರುಕುಳ
ಸೇರಿದಂತೆ ಸರ್ಕಾರಿ ನೌಕರರಿಗೆ ಸಂಬಂಧಪಟ್ಟ ಸಮಸ್ಯೆಗಳಿಗೆ
ಕಾನೂನು ಪರಿಹಾರ ಸೂಚಿಸುವ ದೈನಂದಿನ ಅಂಕಣ
ಸರ್ಕಾರಿ ಕಾರ್ನರ್. ಸೇವಾ ಕಾನೂನು ತಜ್ಞ ಲ.
ರಾಘವೇಂದ್ರ ಅವರು ಸರ್ಕಾರಿ ಉದ್ಯೋಗಸ್ಥರ
ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಾರೆ.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಮ್ಮ ವಿಳಾಸ:
ವಿಜಯವಾಣಿ, ನಂ.24, ಶ್ರೀ ಸಾಯಿರಾಂ ಟವರ್ಸ್, ಮೊದಲ
ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ,
ಬೆಂಗಳೂರು 560018.
ಇ-ಮೇಲ್: sarakaricarner@gmail.com
ದೂರವಾಣಿ: 8884432666, ಫ್ಯಾಕ್ಸ್: 080-26257464.
***
1-2-16.
ಹೆಚ್ಚು ಮೂಲ ವೇತನದಿಂದ ಕಡಿಮೆ ಮೂಲವೇತನದ ಹುದ್ದೆಗೆ
ಹೋಗಬಹುದೇ?
ಕಳೆದ ಬಾರಿ ಕೆಪಿಎಸ್​ಸಿಯವರು ನಡೆಸಿದ ಎಸ್​ಡಿಎ ಪರೀಕ್ಷೆಯನ್ನು
ಇಲಾಖೆಯ ಅನುಮತಿ ಪಡೆದು ಬರೆದಿರುತ್ತೇನೆ. ಇದರಲ್ಲಿ
ಉತ್ತಮವಾದ ಅಂಕಗಳು ಬಂದಿದೆ. ನಾನು 2007ರಿಂದ ಶಿಕ್ಷಣ
ಇಲಾಖೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದು ನನ್ನ
ಮೂಲ ವೇತನ 16,000-00 ರೂ. ಆಗಿದೆ. ನಾನು ಈಗ ಬೇರೆ
ಇಲಾಖೆಗೆ ನೇಮಕಾತಿ ಹೊಂದಿದರೆ ನನ್ನ ವೇತನವನ್ನು ಇದೇ
ವೇತನಕ್ಕೆ ನಿಯಮಿಸುತ್ತಾರೆಯೇ? ಅಥವಾ ಎಸ್​ಡಿಎ ಮೂಲ
ವೇತನ 11,600-00ರಿಂದ ಪ್ರಾರಂಭಿಸುತ್ತಾರೆಯೇ?
ಹಾಗೂ ಹೆಚ್ಚು ಮೂಲ ವೇತನದ ಹುದ್ದೆಯಿಂದ ಕಡಿಮೆ
ಮೂಲವೇತನದ ಹುದ್ದೆಗೆ ಹೋಗಬಹುದೇ? ಈ ಕಡಿಮೆ
ವೇತನದ ಹುದ್ದೆಗೆ ಹೋದರೆ ಈಗ ಪಡೆಯುತ್ತಿರುವ
ವೇತನವನ್ನೇ ಮುಂದುವರಿಸುವರೇ? ದಯಮಾಡಿ ತಿಳಿಸಿರಿ.
| ಈ. ಮಧು, ಶಿಕ್ಷಕರು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 41ಎ (ಜಿ)
ರೀತ್ಯ ನೀವು ಹೆಚ್ಚಿನ ಶ್ರೇಣಿಯ ಹುದ್ದೆಯಿಂದ ಕಡಿಮೆ
ವೇತನ ಶ್ರೇಣಿಗೆ ನೇಮಕವಾದಲ್ಲಿ ನಿಮಗೆ ಯಾವುದೇ
ವೇತನ ರಕ್ಷಣೆ ದೊರಕುವುದಿಲ್ಲ. ಆದರೆ ಈ
ನಿಯಮಾನುಸಾರ ನೀವು ಶಾಲಾ ಶಿಕ್ಷಕರಾಗಿ ನೇಮಕ
ಹೊಂದಿದ ದಿನಾಂಕದಿಂದ ಎಸ್​ಡಿಎ ಹುದ್ದೆಯಲ್ಲಿ
ವೇತನವನ್ನು ನಿಗದಿಪಡಿಸಿಕೊಂಡು ಬರಲಾಗುತ್ತದೆ.
***
2-2-16.
ವಾಗ್ದಂಡನೆ ಎಂದರೇನು?
ವಾಗ್ದಂಡನೆ ವಿಧಿಸಿದ ನಂತರ ಬಡ್ತಿ ನೀಡಬಹುದೇ ಅಥವಾ
ಇಲ್ಲವೇ ಎಂಬುದನ್ನು ತಿಳಿಸಿರಿ.
| ಜಿ. ಲಕ್ಷ್ಮಣಯ್ಯ, ಕಡೂರು , ಚಿಕ್ಕಮಗಳೂರು
ಕರ್ನಾಟಕ ಸರ್ಕಾರಿ ಸೇವಾ (ಸಿಸಿಎ) ನಿಯಮಾವಳಿಯ ನಿಯಮ
8(ಜಿಜಿ)ರ ರೀತ್ಯ ಒಬ್ಬ ಸರ್ಕಾರಿ ನೌಕರ ಅವನ ಕರ್ತವ್ಯ
ನಿರ್ವಹಣೆಯಲ್ಲಿ ಲೋಪ ಎಸಗಿರುವುದನ್ನು ಔಪಚಾರಿಕವಾಗಿ
ದಾಖಲಿಸುವುದೇ ವಾಗ್ದಂಡನೆ. ಸರ್ಕಾರಿ ಸುತ್ತೋಲೆ
ಸಂಖ್ಯೆ ಸಿಆಸುಇ 37, ಸೇಇವಿ 2009, ದಿನಾಂಕ 6-4-2010ರ
ಪ್ರಕಾರ ವಿಧಿಸಿದ ದಿನಾಂಕದಂದೇ ಈ ವಾಗ್ದಂಡನೆಯು
ಅಂತ್ಯಗೊಳ್ಳುತ್ತದೆ. ವಾಗ್ದಂಡನೆ ವಿಧಿಸಿದ ನಂತರವೂ
ನೌಕರನ ಪ್ರಕರಣವನ್ನು ಪದೋನ್ನತಿಗೆ ಪರಿಗಣಿಸಬಹುದು.
***
3-2-16.
ವಾಗ್ದಂಡನೆ ಎಂದರೇನು?
ವಾಗ್ದಂಡನೆ ಎಂದರೇನು? ವಾಗ್ದಂಡನೆ ವಿಧಿಸಿದ ನಂತರ
ಬಡ್ತಿ ನೀಡಬಹುದೇ ಅಥವಾ ಇಲ್ಲವೇ ಎಂಬುದನ್ನು
ತಿಳಿಸಿರಿ.
| ಜಿ. ಲಕ್ಷ್ಮಣಯ್ಯ, ಕಡೂರು , ಚಿಕ್ಕಮಗಳೂರು
ಕರ್ನಾಟಕ ಸರ್ಕಾರಿ ಸೇವಾ (ಸಿಸಿಎ) ನಿಯಮಾವಳಿಯ ನಿಯಮ
8(ಜಿಜಿ)ರ ರೀತ್ಯ ಒಬ್ಬ ಸರ್ಕಾರಿ ನೌಕರ ಅವನ ಕರ್ತವ್ಯ
ನಿರ್ವಹಣೆಯಲ್ಲಿ ಲೋಪ ಎಸಗಿರುವುದನ್ನು ಔಪಚಾರಿಕವಾಗಿ
ದಾಖಲಿಸುವುದೇ ವಾಗ್ದಂಡನೆ. ಸರ್ಕಾರಿ ಸುತ್ತೋಲೆ
ಸಂಖ್ಯೆ ಸಿಆಸುಇ 37, ಸೇಇವಿ 2009, ದಿನಾಂಕ 6-4-2010ರ
ಪ್ರಕಾರ ವಿಧಿಸಿದ ದಿನಾಂಕದಂದೇ ಈ ವಾಗ್ದಂಡನೆಯು
ಅಂತ್ಯಗೊಳ್ಳುತ್ತದೆ. ವಾಗ್ದಂಡನೆ ವಿಧಿಸಿದ ನಂತರವೂ
ನೌಕರನ ಪ್ರಕರಣವನ್ನು ಪದೋನ್ನತಿಗೆ ಪರಿಗಣಿಸಬಹುದು.
***
4-2-16.
ಅನುಕಂಪದ ಮೇಲೆ ನೌಕರಿ ಲಭ್ಯವಾಗುತ್ತದೆಯೇ ?
ನನ್ನ ತಂದೆಯವರು ಅಂತರ್ಜಾತಿ ವಿವಾಹವಾಗಿದ್ದು,
ತದನಂತರ ಸ್ವಜಾತಿಯ ಇನ್ನೊಬ್ಬರನ್ನು ಸರ್ಕಾರದ
ಅನುಮತಿಯಿಲ್ಲದೆ ವಿವಾಹವಾಗಿ ಅವರಿಗೂ ಸಹ ಒಂದು
ಹೆಣ್ಣು ಮಗುವಾಗಿ, ಆ ನನ್ನ ಸಹೋದರಿಗೆ ವಿವಾಹವಾಗಿದೆ.
ನನಗೀಗ 34 ವರ್ಷ ವಯಸ್ಸಾಗಿದ್ದು ನನ್ನ ತಂದೆಯವರು ನನ್ನ
ತಾಯಿಯೊಂದಿಗೆ ವಾಸವಾಗಿದ್ದಾರೆ. ಅವರ ದ್ವಿತೀಯ ಪತ್ನಿ
ಸುಮಾರು 20 ವರ್ಷಗಳ ಹಿಂದೆ ಬಿಟ್ಟು ಹೋಗಿರುತ್ತಾರೆ.
ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿದ್ದ ನನ್ನ
ತಂದೆಯವರು ಇತ್ತೀಚೆಗೆ ನಿಧನ ಹೊಂದಿರುತ್ತಾರೆ. ನನಗೆ
ಸರ್ಕಾರಿ ನಿಯಮಾವಳಿ ರೀತ್ಯ ಅನುಕಂಪದ ಮೇಲೆ ನೌಕರಿ
ಲಭ್ಯವಾಗುತ್ತದೆಯೇ ? |
ದೇವರಾಜ್ ಚಿಕ್ಕಮಗಳೂರು
ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ
ನಿಯಮ 28ರಡಿಯಲ್ಲಿ ಸರ್ಕಾರಿ ನೌಕರನಿಗೆ ಜೀವಂತ ಪತ್ನಿ
ಇರುವಾಗ ತತ್ಕಾಲದಲ್ಲಿ ಅವನಿಗೆ ಅನ್ವಯವಾಗುವ ವೈಯಕ್ತಿಕ
ಕಾನೂನಿನ ಅಡಿಯಲ್ಲಿ ಅನುಮತಿ ಇದ್ದರೂ ಸಹ ಆತನು
ಮೊದಲು ಸರ್ಕಾರದ ಅನುಮತಿಯನ್ನು ಪಡೆಯದೇ
ಇನ್ನೊಂದು ವಿವಾಹವನ್ನು ಮಾಡಿಕೊಳ್ಳತಕ್ಕದ್ದಲ್ಲ
ಎಂದು ತಿಳಿಸಲಾಗಿದೆ. ಅಲ್ಲದೇ ಇತ್ತೀಚಿನ ಸರ್ಕಾರಿ
ಸುತ್ತೋಲೆ ದಿನಾಂಕ 28.8.2015ರಲ್ಲಿ ದ್ವಿತೀಯ ಪತ್ನಿಯು
ಕುಟುಂಬದ ವ್ಯಾಖ್ಯೆಯಲ್ಲಿ ಬರುವುದಿಲ್ಲವಾದ ಕಾರಣ
ದ್ವಿತೀಯ ಪತ್ನಿಗಾಗಲೀ ಅಥವಾ ಅವರ ಮಕ್ಕಳಿಗಾಗಲಿ 1996ರ
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕ)
ನಿಯಮಗಳಡಿಯಲ್ಲಿ ನೇಮಕಾತಿಗೆ ಅವಕಾಶವಿಲ್ಲವೆಂದು
ಸೂಚಿಸಲಾಗಿದೆ. ನೀವು ನಿಮ್ಮ ತಂದೆಯವರ ಮೊದಲ
ಪತ್ನಿಯ ಪುತ್ರರಾಗಿರುವುದರಿಂದ ನಿಮಗೆ ಅನುಕಂಪದ ಮೇಲೆ
ಸರ್ಕಾರಿ ನೌಕರಿ ಲಭ್ಯವಾಗುತ್ತದೆ. (ಹೆಚ್ಚಿನ ವಿವರಗಳಿಗೆ ಲ.
ರಾಘವೇಂದ್ರ ಅವರ ಕರ್ನಾಟಕ ಸರ್ಕಾರಿ ಸೇವಾ
ಕಾನೂನು ಕೈಪಿಡಿ ಯನ್ನು ನೋಡಬಹುದು)
***
5-2-16.
ಅನುಕಂಪದ ಮೇಲೆ ಯಾವುದಾದರೂ ನಿವೃತ್ತಿ ಸೌಲಭ್ಯಗಳು
ಲಭ್ಯವಾಗುತ್ತದೆಯೇ?
ನನ್ನ ಸಂಬಂಧಿಕರೊಬ್ಬರು 25 ವರ್ಷಗಳ ಕಾಲ ಸರ್ಕಾರಿ
ಸೇವೆಯಲ್ಲಿದ್ದು ಲೋಕಾಯುಕ್ತ ಟ್ರ್ಯಾಪ್ ಪ್ರಕರಣದಲ್ಲಿ
ಸಿಲುಕಿ 1 ವರ್ಷ ಸಾದಾ ಜೈಲು ಶಿಕ್ಷೆ ಅನುಭವಿಸಿದ್ದಾರೆ.
ಸರ್ಕಾರವು ಅವರನ್ನು ಸೇವೆಯಿಂದ ವಜಾ ಮಾಡಿದೆ.
ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆ ಹೊಂದಿರುವ ಇವರ
ಮೇಲೆ ಅವಲಂಬಿತರಾದ ಹೆಂಡತಿ ಮಕ್ಕಳ
ಜೀವನೋಪಾಯಕ್ಕಾಗಿ ಸರ್ಕಾರದಿಂದ ಅನುಕಂಪದ ಮೇಲೆ
ಯಾವುದಾದರೂ ನಿವೃತ್ತಿ ಸೌಲಭ್ಯಗಳು
ಲಭ್ಯವಾಗುತ್ತದೆಯೇ?
| ವೆಂಕಟೇಶ್ ಶರಾವತಿನಗರ, ಶಿವಮೊಗ್ಗ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 217ರ
ಉಪಬಂಧಗಳಿಗನುಸಾರವಾಗಿ ದುರ್ನಡತೆಗಾಗಿ,
ದಿವಾಳಿತನಕ್ಕಾಗಿ ವಜಾ ಮಾಡಲಾದ ಅಥವಾ
ತೆಗೆದುಹಾಕಲಾದ ಸರ್ಕಾರಿ ನೌಕರನಿಗೆ ಯಾವ ನಿವೃತ್ತಿ
ವೇತನವನ್ನೂ ಮಂಜೂರು ಮಾಡಲಾಗುವುದಿಲ್ಲ. ಆದರೆ
ಹೀಗೆ ವಜಾಗೊಳಿಸಲಾದ ಸರ್ಕಾರಿ ನೌಕರನು ವಿಶೇಷ
ಪರಿಗಣನೆಗೆ ಅರ್ಹನಾಗಿರುವ ಸಂದರ್ಭದಲ್ಲಿ ಅನುಕಂಪ ಭತ್ಯೆ
ನೀಡಬಹುದು. ಈ ಅನುಕಂಪದ ಅನುದಾನವು ಸರ್ಕಾರಿ
ನೌಕರನು ಮೃತನಾದಾಗ ತಾನಾಗಿಯೇ ನಿಂತು
ಹೋಗುವುದಲ್ಲದೆ, ಅವನ ಕುಟುಂಬಕ್ಕೆ ಕುಟುಂಬ
ನಿವೃತ್ತಿ ವೇತನ ಲಭ್ಯವಾಗುತ್ತದೆ. ಈ ಅನುಕಂಪದ
ಅನುದಾನದ ಪ್ರಮಾಣವು ಸರ್ಕಾರಿ ನೌಕರನು ಸಹಜವಾಗಿ
ನಿವೃತ್ತವಾಗುವ ಸಂದರ್ಭದಲ್ಲಿ ಪಡೆಯುವ ನಿವೃತ್ತಿ ವೇತನದ
ಮೂರನೇ ಎರಡು ಭಾಗದಷ್ಟು ಪರಿಮಿತವಾಗಿರುತ್ತದೆ.
***
6-2-16.
ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಲು ಏನು ಕ್ರಮ
ಕೈಗೊಳ್ಳಬೇಕು
ನಾನು ಸರ್ಕಾರಿ ನೌಕರಳಾಗಿದ್ದು, ಪರಿಶಿಷ್ಟ ಜಾತಿಗೆ
ಸೇರಿದವಳಾಗಿದ್ದೇನೆ. 16 ವರ್ಷದಿಂದ ನಾನು ಸರ್ಕಾರಿ
ಕಚೇರಿಯಲ್ಲಿ ವಾಹನ ಚೊಕ್ಕಟ ಮಾಡುತ್ತಿದ್ದು, ಕೆಲವು
ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಜಾತಿನಿಂದನೆ ಮಾಡಿ
ನನಗೆ ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ. ನನ್ನ ಪತಿ ಖಾಸಗಿ
ಸಂಸ್ಥೆಯಲ್ಲಿದ್ದು ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೆ
ನನ್ನ ಕಚೇರಿಯಲ್ಲಿ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ
ನೋಟಿಸ್ ನೀಡಿ, ನನ್ನ ಉತ್ತರವನ್ನು ಒಪ್ಪಿಕೊಳ್ಳದೇ
ಮಾನಸಿಕ ಕಿರುಕುಳ ಕೊಡುತ್ತಿದ್ದಾರೆ. ಇದಕ್ಕೆ
ಪರಿಹಾರವನ್ನು ನೀಡಿ ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಲು
ಏನು ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿ.
|ಮೀನಾ ಬೆಂಗಳೂರು
ಸರ್ಕಾರಿ ಕಚೇರಿಗಳಲ್ಲಿ ಜಾತಿ ನಿಂದನೆ ಮಾಡುವುದು
ನಾಗರಿಕ ಹಕ್ಕು ಸಂರಕ್ಷಣಾ ಕಾಯ್ದೆ ಅಡಿಯಲ್ಲಿ
ಅಪರಾಧವಾಗುತ್ತದೆ. ಈ ಹಿನ್ನೆಲೆಯಲ್ಲಿ ನೀವು ಪೊಲೀಸ್
ಇಲಾಖೆಯ ನಾಗರಿಕ ಹಕ್ಕು ನಿರ್ದೇಶನಾಲಯಕ್ಕೆ ಜಾತಿ ನಿಂದನೆ
ಮಾಡಿ ಹಿಂಸಿಸುವವರ ವಿರುದ್ಧ ದೂರನ್ನು ನೀಡಬಹುದು.
ಅಲ್ಲದೆ ನಿಮಗೆ ಯಾವುದೇ ಜ್ಞಾಪನ ನೀಡಬೇಕಾದರೂ
ಸರ್ಕಾರಿ ಸೇವಾ ನಿಯಮಾವಳಿಯ ಚೌಕಟ್ಟಿನಲ್ಲೇ ಕಚೇರಿ
ಮುಖ್ಯಾಧಿಕಾರಿಗೆ ನೀಡಬೇಕಾಗುತ್ತದೆ. ಆದ ಕಾರಣ
ಯಾವುದೇ ಬೆದರಿಕೆಗೆ ಬಗ್ಗದೆ ನಿಮ್ಮ ಕರ್ತವ್ಯವನ್ನು
ನಿರ್ವಹಿಸಲು ಜಾಗ್ರತೆ ವಹಿಸಿ.
***
7-2-16.
ವಿಶೇಷ ಕರ್ತವ್ಯಕ್ಕೆ ನಿಯೋಜಿತನಾದಾಗ ಪರಿಹಾರ ಭತ್ಯೆ
ಲಭ್ಯ.
ಪೋಲೀಸ್ ಇಲಾಖೆಗೆ ನೇಮಕ ಹೊಂದಿ ತರಬೇತಿಗೆ
ನಿಯುಕ್ತಿ ಹೊಂದಿರುವ ಅಧಿಕಾರಿ /ಸಿಬ್ಬಂದಿಯು ತರಬೇತಿ
ಅವಧಿಯಲ್ಲಿ ಮನೆ ಬಾಡಿಗೆ ಪಡೆಯಲು ಅರ್ಹರೇ ? ಈ ಬಗ್ಗೆ
ನಿಯಮ ಯಾವುದು?
| ಜಯಕೀರ್ತಿ
ಉತ್ತರ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ
74ರ ಮೇರೆಗೆ ಸರ್ಕಾರಿ ನೌಕರರು ತರಬೇತಿ ಅಥವಾ ವಿಶೇಷ
ಕರ್ತವ್ಯಕ್ಕೆ ನಿಯೋಜಿತನಾದಾಗ ಅವನಿಗೆ ಮನೆ ಬಾಡಿಗೆ ಭತ್ಯೆ
ಅಥವಾ ನಗರ ಪರಿಹಾರ ಭತ್ಯೆ ಲಭ್ಯವಾಗುತ್ತದೆ.
***
8-2-16.
ಅಸಾಧಾರಣ ರಜೆಯನ್ನು ನಿವೃತ್ತಿ ವೇತನಕ್ಕೆ
ಅರ್ಹತಾದಾಯಕ ಸೇವೆ ಎಂದು ಪರಿಗಣಿಸಲಾಗುವುದೇ?
ನಾನು ಸರ್ಕಾರಿ ನೌಕರಳಾಗಿದ್ದು ಅನಿವಾರ್ಯವಾಗಿ 9 ತಿಂಗಳು
ವೈದ್ಯಕೀಯ ಕಾರಣಗಳಿಗಾಗಿ ಅಸಾಧಾರಣ ರಜೆಯನ್ನು
ಪಡೆದುಕೊಂಡಿರುತ್ತೇನೆ. ಇದೇ ಜನವರಿಗೆ 15 ವರ್ಷ
ಸೇವಾವಧಿ ಮುಕ್ತಾಯವಾಗಲಿದ್ದು ಮೇನಲ್ಲಿ
ಸ್ವಯಂನಿವೃತ್ತಿ ಪಡೆಯಲು ಅಪೇಕ್ಷಿಸಿದ್ದೇನೆ. ನಾನು
ಪಡೆದಿರುವ ಅಸಾಧಾರಣ ರಜೆಯನ್ನು ನಿವೃತ್ತಿ ವೇತನಕ್ಕೆ
ಅರ್ಹತಾದಾಯಕ ಸೇವೆ ಎಂದು ಪರಿಗಣಿಸಲಾಗುವುದೇ?
| ಪಲ್ಲವಿ ಶ್ರೀಹರ್ಷ ಮೈಸೂರು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ
244ರಡಿಯಲ್ಲಿ ವೈದ್ಯಕೀಯ ಆಧಾರದ ಮೇಲೆ ಪಡೆದ
ಅಸಾಧಾರಣ ರಜೆಯನ್ನು ಸಹ ಅರ್ಹತಾದಾಯಕ
ಸೇವೆಯೆಂದು ಪರಿಗಣಿಸಬಹುದು. ಆದರೆ ನಿಯಮ 244ಎರಂತೆ
ಲೆಕ್ಕಿಕ್ಕಿಲ್ಲದ ಅವಧಿಯನ್ನು ನಿವೃತ್ತಿ ವೇತನಕ್ಕೆ
ಅರ್ಹತಾದಾಯಕ ಸೇವೆಯೆಂದು ಪರಿಗಣಿಸಲಾಗುವುದಿಲ್ಲ.
ನೀವು 3 ವರ್ಷದ ಒಳಗೆ ಅಸಾಧಾರಣ ರಜೆಯನ್ನು
ಪಡೆದಿರುವುದರಿಂದ ಸ್ವಯಂನಿವೃತ್ತಿ ಹೊಂದಲು
ಯಾವುದೇ ತೊಂದರೆ ಉಂಟಾಗುವುದಿಲ್ಲ.
***
9-2-16.
ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಿಗೆ ಪ್ರಮಾಣ ಪತ್ರ
ದೃಢೀಕರಣ ಅಧಿಕಾರ ಇದೆಯೇ?
ಅನುದಾನಿತ ಪದವಿ ಪೂರ್ವ ಕಾಲೇಜಿನ ಪೂರ್ಣಕಾಲಿಕ
ಕಾಯಂ ಉಪನ್ಯಾಸಕರಿಗೆ ಯಾವುದೇ ಪ್ರಮಾಣಪತ್ರಗಳಿಗೆ
ದೃಢೀಕರಣ ಮಾಡಲು ಅಧಿಕಾರ ಇದೆಯೇ? ಇದಕ್ಕೆ
ಯಾವುದಾದರೂ ವಿಶೇಷ ನಿಯಮಗಳಿವೆಯೇ?
|ಬಸವರಾಜ್ ಬರಮಶೆಟ್ಟಿ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 8
(20)ರಂತೆ ಗೆಜೆಟೆಡ್ ಸರ್ಕಾರಿ ನೌಕರರು ಮಾತ್ರ ಪ್ರಮಾಣ
ಪತ್ರಗಳಿಗೆ ದೃಢೀಕರಣ ಮಾಡಲು ಅಧಿಕಾರವಿರುತ್ತದೆ.
ಅನುದಾನಿತ ಶಾಲೆ ಕಾಲೇಜುಗಳ ಕಾಯಂ ಉಪನ್ಯಾಸಕರು
ದೃಢೀಕರಣ ಮಾಡಲು ಯಾವುದೇ ವಿಶೇಷ ನಿಯಮಗಳಿಲ್ಲ.
(ಹೆಚ್ಚಿನ ವಿವರಗಳಿಗೆ ಲ. ರಾಘವೇಂದ್ರ ಅವರ ಕರ್ನಾಟಕ
ಸರ್ಕಾರಿ ಸೇವಾ ನಿಯಮಗಳು ಪುಸ್ತಕ
ನೋಡಬಹುದಾಗಿದ್ದು ಪುಸ್ತಕಕ್ಕೆ ಮೊಬೈಲ್ ಸಂಖ್ಯೆ
94812 44434ನ್ನು ಸಂರ್ಪಸಬಹುದು)
***
10-2-16.
1963ರ ಕರ್ನಾಟಕ ಸರ್ಕಾರಿ ಸೇವಾ (ವೈದ್ಯೋಪಚಾರ)
ನಿಯಮಾವಳಿ ರೀತ್ಯ ತಂದೆ-ತಾಯಿಯವರ ಮಾಸಿಕ ಆದಾಯ
ರೂ. 4,000ಕ್ಕಿಂತ ಕಡಿಮೆ ಇದ್ದರೆ ವೈದ್ಯಕೀಯ ವೆಚ್ಚ
ಪಡೆಯಲು ಅರ್ಹರು. ಈ ನಿಯಮದ ಆದಾಯದ ಮಿತಿ
ಹೆಚ್ಚಿಸಲಾಗಿದೆಯೇ? ಅಥವಾ ಪೂರ್ಣವಾಗಿ ಮಿತಿಯನ್ನು
ತೆಗೆಯಲಾಗಿದೆಯೇ ? ದಯವಿಟ್ಟು ತಿಳಿಸಿ.
|ಕೆ.ರಮೇಶ್ ಸಿದ್ಧಾರ್ಥ ನಗರ, ಮೈಸೂರು
ಕರ್ನಾಟಕ ಸರ್ಕಾರಿ ನೌಕರರ ವೈದ್ಯಕೀಯ (ಚಿಕಿತ್ಸೆ)
ನಿಯಮಾವಳಿ 63ರ ನಿಯಮ 2(ಜಿಜಿ) ಪ್ರಕಾರ ತಂದೆತಾಯಿಯವರ
ವಾರ್ಷಿಕ ಆದಾಯ 6,000 ರೂಪಾಯಿಗಳನ್ನು ಮೀರದಿದ್ದರೆ
ವೆಚ್ಚ ಪಡೆಯಲು ಅರ್ಹರು ಎಂದು ತಿದ್ದುಪಡಿ ಮಾಡಲಾಗಿದೆ.
***
11-2-16.
ನಾನು ಮತ್ತು ನನ್ನ ಪತ್ನಿ ಸರ್ಕಾರಿ ಪ್ರಾಥಮಿಕ ಶಾಲಾ
ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದೇವೆ. ನಾವು ವಿವಾಹವಾಗಿ 5
ವರ್ಷಗಳಾದರೂ ಮಕ್ಕಳಾಗಿಲ್ಲ. ಶಿಕ್ಷಣ ಇಲಾಖೆ ವತಿಯಿಂದ
ಬಂಜೆತನ ಪರಿಹಾರಕ್ಕೆ ಚಿಕಿತ್ಸೆ ಪಡೆಯಲು ವೈದ್ಯಕೀಯ
ಸೌಲಭ್ಯ ಇದೆಯೇ?
| ರವಿ, ಮೈಸೂರು
ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಚಿಕಿತ್ಸೆ)
ನಿಯಮಗಳು 1963ರ ನಿಯಮ 14(2ಪಿ) ರೀತ್ಯ ಬಂಜೆತನದ
ಚಿಕಿತ್ಸೆಗೆ ತಗುಲಿದ ವೈದ್ಯಕೀಯ ವೆಚ್ಚವನ್ನು
ಸೇವಾವಧಿಯಲ್ಲಿ ಒಂದು ಬಾರಿ 3 ಆವರ್ತಗಳಿಗೆ ಮಾತ್ರ
ಪಡೆಯಲು ಅವಕಾಶ ಕಲ್ಪಿಸಲಾಗಿದೆ. ದಿನಾಂಕ 17.12.2012ರ
ಸರ್ಕಾರಿ ಆದೇಶದಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ
ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆಯನ್ನು ಪಡೆದ ಪ್ರಕರಣಗಳಲ್ಲಿ ಮರು
ಪಾವತಿಗೆ ಸರ್ಕಾರದ ಒಪ್ಪಿಗೆಯನ್ನು ಪಡೆಯಬೇಕೆಂದು
ಸೂಚಿಸಿದ್ದು ಬಂಜೆತನದ ಚಿಕಿತ್ಸೆಯನ್ನು ಪಡೆಯಲು ಮಹಿಳಾ
ಸರ್ಕಾರಿ ನೌಕರಳು 21-39ವರ್ಷದೊಳಗಿರಬೇಕು ಹಾಗೂ
ಇದಕ್ಕೆ ರೂ. 65,000-00 ಗಳನ್ನು ನೀಡಲಾಗುತ್ತದೆ.
***
12-2-16.
ಅನುಕಂಪದ ಆಧಾರದಲ್ಲಿ ಮಕ್ಕಳಿಗೆ ನೌಕರಿ
ದೊರೆಯುತ್ತದೆಯೇ?
ಪತಿ ಹಾಗೂ ಪತ್ನಿ ಇಬ್ಬರೂ ಸರ್ಕಾರಿ ನೌಕರಿಯಲ್ಲಿದ್ದು,
ಇಬ್ಬರಲ್ಲಿ ಒಬ್ಬರು ಅಕಾಲಿಕ ಮರಣ ಹೊಂದಿದರೆ ಅನುಕಂಪದ
ಆಧಾರದಲ್ಲಿ ಮಕ್ಕಳಿಗೆ ನೌಕರಿ ದೊರೆಯುತ್ತದೆಯೇ? ಪಿಂಚಣಿ
ವ್ಯವಸ್ಥೆ ಹೇಗಿರುತ್ತದೆ?
|ಉಮೇಶ್ ಎನ್
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇಲೆ ನೇಮಕ)
ನಿಯಮಾವಳಿಯ 1996ರ ರೀತ್ಯ ಮಕ್ಕಳಿಗೆ ಅನುಕಂಪದ
ಆಧಾರದ ಮೇಲೆ ಸಿ ಗುಂಪಿನ ಹುದ್ದೆಗಳು ಲಭ್ಯವಾಗುತ್ತವೆ.
ಅಲ್ಲದೆ ಕುಟುಂಬ ಪಿಂಚಣಿಯೂ ಸಹ ಅವಲಂಬಿತ ಮಕ್ಕಳಿಗೆ
ದೊರಕುತ್ತವೆ.
***
13-2-16.
ಮಡಿದ ಪತಿಯ ನೌಕರಿಯನ್ನು ವಯೋಮಿತಿ ಮೀರಿದೆ ಎಂದು
ಪತ್ನಿಗೆ ನಿರಾಕರಣೆ.
ಸರ್ಕಾರಿ ನೌಕರರಾಗಿದ್ದ ನನ್ನ ಪತಿ ದಿನಾಂಕ
31.12.2015ರಂದು ಹೃದಯಾಘಾತದಿಂದ ನಿಧನ
ಹೊಂದಿದ್ದಾರೆ. ನಾನು ನಮ್ಮ ಪತಿ ಕೆಲಸ ಮಾಡುತ್ತಿದ್ದ
ಇಲಾಖೆಗೆ ಅನುಕಂಪದ ಮೇಲೆ ನೌಕರಿ ನೀಡಲು ಅರ್ಜಿ
ಸಲ್ಲಿಸಿದಾಗ ವಯೋಮಿತಿ ದಾಟಿದೆ ಎಂದು ನನ್ನ ಅರ್ಜಿ
ತಿರಸ್ಕರಿಸಿದ್ದಾರೆ. ನನಗೀಗ 43 ವರ್ಷ ವಯಸ್ಸು. ದಯವಿಟ್ಟು
ಸಲಹೆ ನೀಡಿ?
|ಸಾವಿತ್ರಿ ಎಂ ಚಿಕ್ಕಮಗಳೂರು
ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೌಕರಿ ಭರ್ತಿ)
ನಿಯಮಗಳು 1977ರ ನಿಯಮ 6ರಲ್ಲಿ ನೇರ ನೇಮಕಾತಿಗೆ
ಗರಿಷ್ಠ 35 ವರ್ಷಗಳನ್ನು ನಿಗದಿಪಡಿಸಿದ್ದು, ಇದೇ ನಿಯಮದ
ಅನ್ವಯ ಅಭ್ಯರ್ಥಿ ವಿಧವೆಯಾಗಿದ್ದಲ್ಲಿ 10 ವರ್ಷಗಳ ವಿನಾಯಿತಿ
ನೀಡಬೇಕೆಂದು ಸೂಚಿಸಲಾಗಿದೆ. ಹೀಗಿರುವಲ್ಲಿ ನಿಮ್ಮ
ಪತಿಯವರ ಇಲಾಖಾ ನೇಮಕ ಪ್ರಾಧಿಕಾರಿದವರು ನಿಮ್ಮನ್ನು
ಅನುಕಂಪದ ಮೇರೆಗೆ ನಿಯುಕ್ತಿಗೊಳಿಸಿಕೊಳ್ಳಲು
ನಿರಾಕರಿಸಿರುವುದು ನಿಯಮಾವಳಿಯ ಉಲ್ಲಂಘನೆಯಾಗಿದೆ.
ಆದ ಕಾರಣ ನೀವು ಮತ್ತೊಮ್ಮೆ ಮನವರಿಕೆ ಮಾಡಿ ಅರ್ಜಿ
ಸಲ್ಲಿಸಬಹುದು.
***
14-2-16.
ಚುನಾವಣೆ ಕರ್ತವ್ಯಕ್ಕೆ ಹಾಜರಾದರೆ ಗಳಿಕೆ ರಜೆ ಸಿಗುವುದೇ?
ನಾನು ಕಳೆದ ಮೇ ತಿಂಗಳಿನಲ್ಲಿ ನಡೆದ ಗ್ರಾಮ ಪಂಚಾಯತ್
ಸಾರ್ವತ್ರಿಕ ಚುನಾವಣೆಯಲ್ಲಿ ಸಹಾಯಕ ಚುನಾವಣಾ
ಅಧಿಕಾರಿಯಾಗಿ ವೆಕೇಶನ್ ಅವಧಿಯಲ್ಲಿ 1 ತಿಂಗಳ ಕಾಲ
ಚುನಾವಣಾ ಕರ್ತವ್ಯಗಳನ್ನು ನಿರ್ವಹಿಸಿದ್ದೆ. ನನಗೆ ಗಳಿಕೆ ರಜೆ
ಸೌಲಭ್ಯ ಸಿಗುವುದೇ?
|ಶೇಖರಯ್ಯ ಸಹಶಿಕ್ಷಕ, ದೇವದುರ್ಗ,ರಾಯಚೂರು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 113ರಂತೆ
ನೌಕಕರು ರಜಾ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದರೆ ನಿಯಮ
112ರಂತೆ ವರ್ಷಕ್ಕೆ ಗರಿಷ್ಠ 30 ದಿನಗಳ ಕಾಲ ಗಳಿಕೆ ರಜೆಯನ್ನು
ಪಡೆಯಲು ಅರ್ಹರಾಗಿರುತ್ತಾರೆ.
***
15-2-16.
ಹೆಚ್ಚುವರಿಯಾಗಿ ಪಿಂಚಣಿಯನ್ನು ನೀಡಲಾಗುವುದೇ?
ನಾನು ಸರ್ಕಾರಿ ಸೇವೆಯಿಂದ ನಿವೃತ್ತನಾಗಿದ್ದು ಸದ್ಯ
81ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ. ನನಗೆ ಹೆಚ್ಚುವರಿಯಾಗಿ
ಪಿಂಚಣಿಯನ್ನು ನೀಡಲಾಗುವುದೇ?
|ಬಿ.ಟಿ. ರಾಜಪ್ಪ ಬೀಚದಹಳ್ಳಿ, ಕೆ.ಆರ್. ನಗರ
ರಾಜ್ಯ ಸರ್ಕಾರವು 2010ರ ಅಕ್ಟೋಬರ್​ನಲ್ಲಿ ಹೊರಡಿಸಿದ
ಅಧಿಸೂಚನೆಯಂತೆ 80 ವರ್ಷ ದಾಟಿ 81ನೇ ವರ್ಷಕ್ಕೆ ಪದಾರ್ಪಣೆ
ಮಾಡಿದ ಮೊದಲ ದಿನದಿಂದಲೇ ನಿವೃತ್ತ ಸರ್ಕಾರಿ ನೌಕರರು
ಶೇ.20 ಪಿಂಚಣಿ ಹೆಚ್ಚಳ ಸೌಲಭ್ಯಕ್ಕೆ ಅರ್ಹರಾಗುತ್ತಾರೆಂದು
ತಿಳಿಸಲಾಗಿದೆ. ಆದ ಕಾರಣ ನೀವು ಈ ಹೆಚ್ಚಳವನ್ನು ಪಡೆಯಲು
ಅರ್ಹರಾಗಿರುತ್ತೀರಿ.
***
16-2-16.
ಪ್ರತಿವರ್ಷ ಮಂಜೂರಾತಿ ಪತ್ರ ಪಡೆಯಬೇಕೇ?
ಒಂದು ಹುದ್ದೆಯಲ್ಲಿ ಸರ್ಕಾರ ನಿಗದಿಪಡಿಸಿದ ಗರಿಷ್ಠ ಮಿತಿ
ತಲುಪಿದ ಮೇಲೆ ಕೊಡಲಾಗುವ ಸ್ಥಗಿತ ವೇತನದ ಬಡ್ತಿ
ಪಡೆಯಲು ಇಲಾಖೆಯ ನೇಮಕಾತಿ ಪ್ರಾಧಿಕಾರದಿಂದ ಪ್ರಥಮ
ಸ್ಥಗಿತ ವೇತನ ಮೊದಲ್ಗೊಂಡು ಪ್ರತಿವರ್ಷ ಮಂಜೂರಾತಿ
ಪತ್ರ ಪಡೆಯಬೇಕೇ? ಹಾಗೆ ಮಂಜೂರಾತಿ ಪಡೆಯದೆ ಸ್ಥಗಿತ
ವೇತನ ಬಡ್ತಿಯನ್ನು ಕಚೇರಿ ಮುಖ್ಯಸ್ಥರ
ಅನುಮತಿಯೊಂದಿಗೆ ಸೇರ್ಪಡೆ ಮಾಡಿ ತೆಗೆದದ್ದಾದರೆ ನಿವೃತ್ತಿ
ವೇತನದ ಸಂದರ್ಭದಲ್ಲಿ ಏನಾದರೂ
ತೊಂದರೆಯಾಗುತ್ತದೆಯೇ?
|ಶಿವಾನಂದ ಬಿ. ಮರಿಗೇರಿ ಸಹಶಿಕ್ಷಕರು ,ಚಿಕ್ಕೊಪ್ಪ, ಬೆಳಗಾವಿ
ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 3, ಎಫ್​ಆರ್​ಪಿ 96, ದಿನಾಂಕ
18-3-1996ರ ಪ್ಯಾರಾ 7ರಲ್ಲಿ ಎ ಮತ್ತು ಬಿ ಗುಂಪಿನ
ಹುದ್ದೆಗಳಿಗೆ ಸಂಬಂಧಿಸಿದಂತೆ ಈ ಸ್ಥಗಿತ ವೇತನವನ್ನು ಆಡಳಿತ
ಇಲಾಖೆಯ ಮುಖ್ಯಸ್ಥರು ಮಂಜೂರು ಮಾಡುವ ಅಧಿಕಾರ
ಹೊಂದಿರುತ್ತಾರೆ. ಅದೇ ರೀತಿಯಾಗಿ ಸಿ ಮತ್ತು ಡಿ
ಗುಂಪಿನ ಹುದ್ದೆಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ
ಅಧಿಕಾರಿಗಳು ಮಂಜೂರು ಮಾಡುವ
ಪ್ರಾಧಿಕಾರಿಯಾಗಿರುತ್ತಾರೆ. ಆದ ಕಾರಣ ನೀವು ಜಿಲ್ಲಾ
ಮಟ್ಟದ ಅಧಿಕಾರಿಯಿಂದ (ಡಿಡಿಪಿಐ) ಮಂಜೂರು
ಮಾಡಿಸಿಕೊಂಡರೆ ನಿವೃತ್ತಿ ಸಂದರ್ಭದಲ್ಲಿ ಯಾವುದೇ
ತೊಂದರೆಯಾಗುವುದಿಲ್ಲ.
***
17-2-16.
ಫ್ಯಾಮಿಲಿ ಪ್ಲಾನಿಂಗ್ ಆಪರೇಷನ್ ಮಾಡಿಸಿಕೊಂಡರೆ ಬಡ್ತಿ
ಸಿಗುವುದೇ?
ನಾನು ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ನನಗೀಗ 10
ವರ್ಷದ ಮಗಳಿದ್ದಾಳೆ. ನನ್ನ ಜನ್ಮ ದಿನಾಂಕ 12.6.1971
ಆಗಿದ್ದು, ನಾನು ಫ್ಯಾಮಿಲಿ ಪ್ಲಾನಿಂಗ್ ಆಪರೇಷನ್
ಮಾಡಿಸಿಕೊಂಡರೆ ಸಣ್ಣ ಕುಟುಂಬ ವಿಶೇಷ ಬಡ್ತಿ ಪಡೆಯಲು
ಅರ್ಹಳೇ?
|ಬಿ. ಜಯಶ್ರೀ, ಹಂಸಭಾವಿ
ಕುಟುಂಬ ಯೋಜನೆಯನ್ನು ಅನುಸರಣೆ ಮಾಡುವ
ರಾಜ್ಯ ಸರ್ಕಾರಿ ನೌಕರರಿಗೆ ಉತ್ತೇಜನ ನೀಡುವ ಸಲುವಾಗಿ
ದಿನಾಂಕ 1.10.1985ರ ಸರ್ಕಾರಿ ಆದೇಶದಲ್ಲಿ (ಸಂಖ್ಯೆ ಎಫ್​ಡಿ
27, ಎಸ್​ಆರ್​ಎಸ್ 85,) ಸರ್ಕಾರಿ ನೌಕರಳು 45 ವರ್ಷದೊಳಗಿದ್ದು,
ಆಕೆಯ ಪತಿ 50 ವರ್ಷ ದಾಟಿರಬಾರದು. ಅಂತಹವರು ಈ
ಯೋಜನೆಯನ್ನು ಅಳವಡಿಸಿಕೊಂಡರೆ ವಿಶೇಷ ವೇತನ
ಬಡ್ತಿ ದೊರಕುತ್ತದೆ. ನೀವು ದಿನಾಂಕ 12.6.2016ರೊಳಗೆ
ಈ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಲ್ಲಿ ಕುಟುಂಬ
ಯೋಜನೆಯ ವಿಶೇಷ ಭತ್ಯೆ ಲಭ್ಯವಾಗುತ್ತದೆ.
***
18-2-16.
ಯಾವ ನಿಯಮದಡಿಯಲ್ಲಿ ವೈದ್ಯಕೀಯ ರಜೆಯನ್ನು
ಪಡೆಯಬಹುದು?
ನಾನು ಸರ್ಕಾರಿ ಪ್ರೌಢಶಾಲೆ ಶಿಕ್ಷಕಿಯಾಗಿದ್ದು ಕರ್ತವ್ಯದ
ಸಮಯದಲ್ಲಿ ತಲೆ ಸುತ್ತಿ ಬಿದ್ದು ಕೈಮೂಳೆ ಮುರಿದು
ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ಕರ್ನಾಟಕ ಸರ್ಕಾರಿ
ಸೇವಾ ನಿಯಮಾವಳಿಯ ಯಾವ ನಿಯಮದಡಿಯಲ್ಲಿ
ವೈದ್ಯಕೀಯ ರಜೆಯನ್ನು ಪಡೆಯಬಹುದು?
|ಶಿಲಾರತ್ನ ಧಾರವಾಡ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ
183ರಡಿಯಲ್ಲಿ ಅಧಿಕೃತ ವೈದ್ಯಕೀಯ
ವೈದ್ಯಾಕಾರಿಗಳಿಂದ ನಿಯಮ 189ರಲ್ಲಿ ಸೂಚಿಸಲಾದ
ನಮೂನೆಯಲ್ಲಿ ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸಿ
ರಜೆ ಪಡೆಯಬಹುದು.
***
19-2-16
ಮುಂಬಡ್ತಿಯನ್ನು ಬಿಟ್ಟುಕೊಡಬೇಕಾಗುತ್ತದೆಯೇ?
ನನ್ನನ್ನು 2006ರಲ್ಲಿ ಬೆರಳಚ್ಚುಗಾರನ ಹುದ್ದೆಯಿಂದ
ಶೀಘ್ರಲಿಪಿಕಾರ ಹುದ್ದೆಗೆ ನಿಯಮ 32ರಡಿಯಲ್ಲಿ
ಪ್ರಭಾರದಲ್ಲಿರಿಸಲಾಗಿದೆ. 2006ರಿಂದಲೇ ನನ್ನ
ಶೀಘ್ರಲಿಪಿಕಾರನ ಹುದ್ದೆ ಸಕ್ರಮಗೊಳಿಸಿದಲ್ಲಿ ನಾನು
ಈಗಾಗಲೇ ಪಡೆದಿರುವ ಪ್ರಭಾರ ಭತ್ಯೆಯನ್ನು ವಾಪಸ್ಸು
ಮಾಡಬೇಕಾಗುತ್ತದೆಯೇ? ಹಾಗೆಯೇ, ಬೆರಳಚ್ಚುಗಾರನ
ಹುದ್ದೆಯಲ್ಲಿ ಪಡೆದಿರುವ 10 ಮತ್ತು 15 ವರ್ಷಗಳ ಕಾಲಮಿತಿ
ಮುಂಬಡ್ತಿಯನ್ನು ಬಿಟ್ಟುಕೊಡಬೇಕಾಗುತ್ತದೆಯೇ?
|ಎಸ್.ಎಂ. ಪಾಟೀಲ್, ಶೀಘ್ರಲಿಪಿಕಾರ ವಾಣಿಜ್ಯ ತೆರಿಗೆ
ಇಲಾಖೆ
ಕರ್ನಾಟಕ ಸರ್ಕಾರಿ (ಪಿಪಿಪಿ) ನಿಯಮಾವಳಿ 1973ರ ರೀತ್ಯ
ನಿಮ್ಮನ್ನು ಪೂರ್ವಾನ್ವಯವಾಗಿ ಪದೋನ್ನತಿಗೊಳಿಸಿದಲ್ಲಿ
ನಿಮಗೆ ಆಗಿನಿಂದಲೇ ವೇತನಬಡ್ತಿ ಇತ್ಯಾದಿ ಸೌಲಭ್ಯಗಳು
ಲಭ್ಯವಾಗುವುದರಿಂದ ನಿಮ್ಮ ವೇತನದಲ್ಲಿ ಏನೂ
ವ್ಯತ್ಯಾಸವಾಗದಿದ್ದಲ್ಲಿ ಈ ಪ್ರಭಾರ ಭತ್ಯೆಯನ್ನು
ಹಿಂದಿರುಗಿಸುವುದಾಗಲೀ ಅಥವಾ 10-15 ವರ್ಷಗಳ ಕಾಲ
ಮಿತಿ ಬಡ್ತಿಯನ್ನು ಬಿಟ್ಟುಕೊಡುವುದಾಗಲೀ
ಅವಶ್ಯವಿರುವುದಿಲ್ಲ.
***
20-2-16
ಎಚ್ಐವಿ ಪೀಡಿತನಾಗಿದ್ದು ಕರ್ತವ್ಯಕ್ಕೆ ರಾಜಿನಾಮೆ ನೀಡಲು
ಅರ್ಹನೆ?
ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ 2003ರಿಂದ ಪ್ರಥಮ ದರ್ಜೆ
ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಆದರೆ, ಎಚ್​ಐವಿ
ಪೀಡಿತನಾಗಿರುವ ಕಾರಣ ಕರ್ತವ್ಯ ನಿರ್ವಹಿಸಲು ಆಗುತ್ತಿಲ್ಲ.
ದಿನೇ ದಿನೇ ಕಾಯಿಲೆ ಉಲ್ಬಣಗೊಳ್ಳುತ್ತಿರುವ ಕಾರಣ
ಕರ್ತವ್ಯಕ್ಕೆ ರಾಜೀನಾಮೆ ನೀಡಲು ನಾನು ಅರ್ಹನೇ
ಅಥವಾ ಅನರ್ಹನೇ ಎಂಬ ಗೊಂದಲ ಪರಿಹರಿಸಿ.
|ಕೃಷ್ಣ ಎನ್.
ಈ ಗಂಭೀರ ಸ್ವರೂಪದ ಕಾಯಿಲೆಯ ಹೊರತಾಗಿಯೂ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 285(2)
ರೀತ್ಯಾ ಕನಿಷ್ಠ ಹದಿನೈದು ವರ್ಷ ಸೇವೆ ಸಲ್ಲಿಸದ ಹೊರತು
ಸ್ವಯಂ ನಿವೃತ್ತಿ ಹೊಂದಲು ಅವಕಾಶ ಇರುವುದಿಲ್ಲ.
ರಾಜೀನಾಮೆ ಸಲ್ಲಿಸಿದರೂ ಯಾವುದೇ ನಿವೃತ್ತಿವೇತನ,
ಸೌಲಭ್ಯಗಳು ಲಭ್ಯವಾಗುವುದಿಲ್ಲ. ಆದ್ದರಿಂದ ನೀವು
ಸದ್ಯದ ಪರಿಸ್ಥಿತಿಯಲ್ಲಿ ಸ್ವಯಂ ನಿವೃತ್ತಿಹೊಂದಲು
ಅನರ್ಹರಾಗಿರುತ್ತೀರಿ.
***
21-2-16.
ಮಾತೃತ್ವ ರಜೆ ಪಡೆಯುವ ಅರ್ಹತೆ ಕುರಿತು ತಿಳಿಸಿ.
ನಾನು ಸರ್ಕಾರಿ ನೌಕರಳಾಗಿದ್ದು 10 ವರ್ಷಗಳ ಕಾಲ ಸೇವೆ
ಸಲ್ಲಿಸಿದ್ದೇನೆ. ನನಗೊಂದು ಮಗುವಿದ್ದು, 2ನೇ ಮಗು
ಏಳೂವರೆ ತಿಂಗಳಿಗೆ ಜನಿಸಿ 20 ದಿನಗಳ ಬಳಿಕ ಮರಣ ಹೊಂದಿದೆ.
ಕೆ.ಸಿ.ಎಸ್.ಆರ್. ಪ್ರಕಾರ ನಾನು ಆರೂವರೆ ತಿಂಗಳು ಹೆರಿಗೆ ರಜೆ
ಪಡೆದಿದ್ದರೂ ಮಗು ಮರಣ ಹೊಂದಿರುವ ಕಾರಣ ಈ ರಜೆ
ಪಡೆಯಲು ಅರ್ಹಳಲ್ಲ ಎಂದು ಕಚೇರಿಯಲ್ಲಿ
ಹೇಳುತ್ತಿದ್ದಾರೆ. ನಿಯಮಾವಳಿ ರೀತ್ಯ ನಾನು ಮಾತೃತ್ವ
ರಜೆ ಪಡೆಯಲು ಅರ್ಹಳಾಗಿದ್ದೇನೆಯೇ ಸೂಚಿಸಿ.
| ಗೀತಾ ಅರಸಿಕೆರೆ ತಾಲೂಕು, ಹಾಸನಜಿಲ್ಲೆ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ
135ರಡಿಯಲ್ಲಿ ಮಹಿಳಾ ಸರ್ಕಾರಿ ನೌಕರರಿಗೆ 2 ಜೀವಂತ ಮಕ್ಕಳ
ಪಾಲನೆಗೆ 180 ದಿನಗಳ ಹೆರಿಗೆ ರಜೆ ಪಡೆಯಲು ಅವಕಾಶ
ಕಲ್ಪಿಸಲಾಗಿದೆ. ನಿಮ್ಮ 2ನೇ ಮಗು ಅಲ್ಪ ಕಾಲದಲ್ಲೇ ಮರಣ
ಹೊಂದಿದ್ದರೂ ನೌಕರಳ ಆರೋಗ್ಯ ಸ್ಥಿತಿ
ಉತ್ತಮಗೊಳ್ಳಲು ಈ ಹೆರಿಗೆ ರಜೆ ನೀಡುವುದು ನಿಯಮಾವಳಿ
ರೀತ್ಯಾ ನ್ಯಾಯೋಚಿತವಾಗಿದೆ. ಹಾಗಾಗಿ ನಿಮ್ಮ
ಕಚೇರಿಯವರು ತಳೆದಿರುವ ತಗಾದೆಯು ನಿಯಮಬದ್ಧವಾಗಿಲ್ಲ.
***
22-2-16.
ನನ್ನ ಮೊದಲ ಹೆಂಡತಿಗೆ 2 ಮಕ್ಕಳಾಗಿದ್ದು ಅವಳಿಗೆ ಮುಂದೆ
ಮಕ್ಕಳಾಗದಂತೆ ಆಪರೇಷನ್ ಮಾಡಿಸಿ ಕುಟುಂಬ
ಯೋಜನೆಯ ವಿಶೇಷ ಭತ್ಯೆಯನ್ನು ಪ್ರತಿ ತಿಂಗಳು
ಪಡೆಯುತ್ತಿರುತ್ತೇನೆ. ಅನಂತರ ಕಾರಣಾಂತರಗಳಿಂದ
ನಾವು ಕಾನೂನಿನ ಮೂಲಕ ವಿಚ್ಛೇದನವನ್ನು
ಪಡೆದಿರುತ್ತೇವೆ. 2ನೇ ಹೆಂಡತಿಗೆ 1 ಗಂಡು ಮಗು ಜನಿಸಿದ್ದು,
ಈಗ ಮೂರು ಮಕ್ಕಳಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಸಿಗುವ
ವಿಶೇಷ ಭತ್ಯೆಯ ಸೌಲಭ್ಯವನ್ನು
ಕಡಿತಗೊಳಿಸಲಾಗುತ್ತದೆಯೆ?
|ಮಂಜುನಾಥ್ ಶಿಕ್ಷಕರು, ಮಂಡ್ಯ
ಕರ್ನಾಟಕ ಸರ್ಕಾರದ 1985ರ ಸರ್ಕಾರಿ ಆದೇಶದಲ್ಲಿ 2
ಜೀವಂತ ಮಕ್ಕಳಿರುವವರಿಗೆ ಮಾತ್ರ ಈ ವಿಶೇಷ
ಭತ್ಯೆಯನ್ನು ಉತ್ತೇಜನ ಪೂರ್ವಕವಾಗಿ ನೀಡಲಾಗುತ್ತಿದೆ.
ನಿಮಗೆ ಎರಡನೇ ಪತ್ನಿಯಲ್ಲಿ ಮತ್ತೊಂದು ಮಗು
ಜನಿಸಿರುವುದರಿಂದ ನೀವು ಈ ವಿಶೇಷ ಭತ್ಯೆಯನ್ನು ಈ
ಮಗು ಜನಿಸಿದ ದಿನಾಂಕದಿಂದ ಸರ್ಕಾರಕ್ಕೆ ಹಿಂತಿರುಗಿಸಿ
ಕಡಿತಗೊಳಿಸಿಕೊಳ್ಳಬೇಕು.
***
23-2-16.
ಎಲ್ಟಿಸಿ ಸೌಲಭ್ಯದಡಿ ವಿಮಾನ ಪ್ರಯಾಣ ಮಾಡಬಹುದೇ?
ನಾನು ಬಿ ಗ್ರೂಪ್ ವೃಂದಕ್ಕೆ ಸೇರಿದ್ದು ಎಲ್​ಟಿಸಿ ಸೌಲಭ್ಯದಡಿ
ಅಂಡಮಾನ್ ದ್ವೀಪ ಸಮೂಹಕ್ಕೆ ಪ್ರವಾಸ ಮಾಡಿದೆ. ಈ
ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು
ಘಟನೋತ್ತರ ಅನುಮತಿ ನೀಡಿದ್ದಾರೆ. ಈ ದ್ವೀಪ
ಸಮೂಹಗಳಿಗೆ ರೈಲು ಮತ್ತು ರಸ್ತೆ
ಸಂಪರ್ಕವಿಲ್ಲದಿರುವುದರಿಂದ ವಿಮಾನ ಪ್ರಯಾಣಕ್ಕೆ
ಅವಕಾಶವಿದೆಯೇ?
|ಎಚ್. ಆರ್. ಗಂಗಾಧರ್ ಬೆಂಗಳೂರು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ
550ರಡಿಯಲ್ಲಿ ರೈಲು ಅಥವಾ ರಸ್ತೆ ಸಂಪರ್ಕ ಇಲ್ಲದಿರುವ
ಅಂಡಮಾನ್ ದ್ವೀಪ ಸಮೂಹಕ್ಕೆ ಹೋಗಿಬರಲು ನಿಯಮ
451ರಡಿಯಲ್ಲಿ ವರ್ಗೀಕರಿಸಲಾದ ಅಧಿಕಾರಿ ವರ್ಗದವರಿಗೆ ಅವರು
ಹೊಂದಿರುವ ಮೂಲ ವೇತನದ ಆಧಾರದ ಮೇಲೆ ವಿಮಾನದ
ಮೂಲಕ ಪ್ರಯಾಣಿಸಲು ಅವಕಾಶವಿದೆ. ನಿಮ್ಮ ಮೂಲವೇತನ
ಈ ನಿಯಮಾವಳಿ ರೀತ್ಯಾ ಇದ್ದರೆ ನೀವು ವಿಮಾನ
ಪ್ರಯಾಣಕ್ಕೆ ಎಲ್​ಟಿಸಿ ಸೌಲಭ್ಯವನ್ನು ಪಡೆಯಬಹುದು. ಇಲ್ಲದೆ
ಹೋದಲ್ಲಿ ಪ್ರಥಮ ದರ್ಜೆ ರೈಲು ಪ್ರಯಾಣದ ದರವನ್ನು
ನಿಮಗೆ ನೀಡಲಾಗುವುದು.
***
24-2-16.
ನಾನು ಪೊಲೀಸ್ ಇಲಾಖೆಯಲ್ಲಿ 8 ವರ್ಷ ಕಾಲ ಪೇದೆಯಾಗಿ
ಸೇವೆ ಸಲ್ಲಿಸಿ, ಇಲಾಖೆಯ ಅನುಮತಿ ಪಡೆದು ಇತ್ತೀಚೆಗೆ ನಡೆದ
ಸಿಇಟಿ ಪರೀಕ್ಷೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಆಯ್ಕೆ
ಆಗಿರುತ್ತೇನೆ. ಆದರೆ, ನಮ್ಮ ಶಾಲೆಯ
ಮುಖ್ಯೋಪಾಧ್ಯಾಯರು ನಿಮ್ಮ ಹಿಂದಿನ ಸೇವೆಯ
ಸಾಂರ್ದಭಿಕ ರಜೆ ಮತ್ತು ನಿರ್ಬಂಧಿತ ರಜೆ ಲೆಕ್ಕಕ್ಕೆ
ಬರುವುದಿಲ್ಲ. ನೀವು ಹೊಸದಾಗಿ ಸೇವೆಗೆ
ಸೇರಿರುವುದರಿಂದ ತಿಂಗಳಿಗೆ ಒಂದು ದಿನದಂತೆ ಸಾಂರ್ದಭಿಕ
ರಜೆ ನೀಡಲಾಗುವುದೆಂದು ತಿಳಿಸಿರುತ್ತಾರೆ. ನಾನು
ಪೊಲೀಸ್ ಇಲಾಖೆಯಲ್ಲಿದ್ದಾಗ ನನ್ನ ಲೆಕ್ಕದಲ್ಲಿ 11
ಸಾಂರ್ದಭಿಕ ರಜೆ ಮತ್ತು 2 ನಿರ್ಬಧಿಂತ ರಜೆ ಇದ್ದು ಈ ರಜೆಯು
ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಯಲ್ಲೂ
ಮುಂದುವರಿಯುವುದೇ ಎಂದು ನಿಯಮಾವಳಿ ಪ್ರಕಾರ
ಪರಿಹಾರ ಸೂಚಿಸಿ.
|ಎಂ.ಎಸ್. ನಾಗರಾಜ್ ಗುಂಡ್ಲುಪೇಟೆ, ಚಾಮರಾಜನಗರ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ
252ಬಿಯಂತೆ ನೀವು ಪೊಲೀಸ್ ಪೇದೆಯ ಹುದ್ದೆಗೆ
ರಾಜೀನಾಮೆ ಸಲ್ಲಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ
ಕರ್ತವ್ಯಕ್ಕೆ ಹಾಜರಾಗಿದ್ದರೆ ಈ ನಿಯಮಾವಳಿಯ ಅನುಬಂಧ
ಬಿನಂತೆ 15 ದಿನಗಳ ಕಾಲ ಸಾಂರ್ದಭಿಕ ರಜೆ ಮತ್ತು ನಿರ್ಬಂಧಿತ
ರಜೆ ಮುಂದುವರಿಯುತ್ತದೆ. ನೀವು ಈಗಾಗಲೇ
ಹೇಳಿದಂತೆ ಇಲಾಖಾ ಅನುಮತಿ ಪಡೆದು ಅರ್ಜಿ
ಸಲ್ಲಿಸಿರುವುದರಿಂದ ನಿಮ್ಮ ಲೆಕ್ಕದಲ್ಲಿರುವ 11 ದಿನಗಳ
ಸಾಂರ್ದಭಿಕ ರಜೆ ಮತ್ತು 2 ದಿನ ನಿರ್ಬಂಧಿತ ರಜೆ ಪ್ರಾಥಮಿಕ
ಶಾಲಾ ಹುದ್ದೆಯಲ್ಲೂ ಮುಂದುವರಿಯುತ್ತವೆ. ನಿಮ್ಮ
ಮುಖ್ಯೋಪಾಧ್ಯಾಯರು ತೆಗೆದಿರುವ ಆಕ್ಷೇಪ
ನಿಯಮಾವಳಿ ರೀತ್ಯಾ ಸರಿಯಾದ ಕ್ರಮವಲ್ಲ.
***
25-2-16.
ಒಬ್ಬ ಸರ್ಕಾರಿ ನೌಕರನ ವಿರುದ್ಧ 2006ರಲ್ಲಿ ಶಿಕ್ಷಣ ಇಲಾಖೆಯ
ಅಧಿಕಾರಿಯು ಒಂದೇ ಆರೋಪಕ್ಕೆ ಸಂಬಂಧಪಟ್ಟಂತೆ
ಏಕಕಾಲದಲ್ಲಿ ಇಲಾಖಾ ವಿಚಾರಣೆ ಕಾಯ್ದಿರಿಸಿ ಮತ್ತು ಎರಡು
ಕ್ರಿಮಿನಲ್ ದಾವೆ ದಾಖಲಿಸಿದ್ದಾರೆ. ಅದಾಗಿ 9 ವರ್ಷವಾದರೂ
ಸಹ ಇದುವರೆಗೂ ಇಲಾಖಾ ವಿಚಾರಣೆ ದಾವೆಯಾಗಲೀ
ಅಥವಾ ಕ್ರಿಮಿನಲ್ ದಾವೆಯಾಗಲಿ ಇತ್ಯರ್ಥವಾಗಿಲ್ಲ . ಈ
ವಿಚಾರವಾಗಿ ನೌಕರನಿಗೆ ದಯವಿಟ್ಟು ಸಲಹೆ ನೀಡಿ.
|ಚಿಕ್ಕತಿಮ್ಮಯ್ಯ ಕೆ. ಕಿರುಗಾವಲು, ಮಂಡ್ಯಜಿಲ್ಲೆ
ಕರ್ನಾಟಕ ಸರ್ಕಾರಿ ಸೇವಾ (ಸಿಸಿಎ) ನಿಯಮಾವಳಿ ರೀತ್ಯಾ
ಸರ್ಕಾರಿ ನೌಕರನ ವಿರುದ್ಧ ಇರುವ ಯಾವುದೇ ಇಲಾಖಾ
ವಿಚಾರಣೆಯನ್ನು 6 ತಿಂಗಳೊಳಗೆ ಮುಗಿಸಬೇಕೆಂದು
ಸರ್ಕಾರವು ಆದೇಶಿಸಿದೆ. ಅಲ್ಲದೆ ಕ್ರಿಮಿನಲ್
ಮೊಕದ್ದಮೆಯನ್ನೂ ಸಹ ಕೂಡಲೇ
ಇತ್ಯರ್ಥಗೊಳಿಸಬೇಕೆಂದು ಈ ನಿಯಮಾವಳಿ ತಿಳಿಸುತ್ತದೆ.
ಹೀಗಾಗಿದ್ದರೂ 9 ವರ್ಷದಿಂದ ಪ್ರಕರಣ ಇತ್ಯರ್ಥ
ಪಡಿಸದಿರುವುದು ಉದ್ದೇಶ ಪೂರ್ವಕವಾದ ನಿಧಾನ
ಪ್ರವೃತ್ತಿಯಾಗಿರಬಹುದು ಈ ಹಿನ್ನೆಲೆಯಲ್ಲಿ ಸ್ವಾಭಾವಿಕ
ನ್ಯಾಯವನ್ನು ಪಡೆಯಲು ನ್ಯಾಯಾಲಯದ ಮೊರೆ
ಹೋಗಬಹುದು.
***
26-2-16.
ಅಮಾನತ್ತಿನಲ್ಲಿರುವವರು ಮೃತಪಟ್ಟರೆ ಅವರ ನೌಕರಿ
ಕುಟುಂಬದವರಿಗೆ ದೊರೆಯುವುದೇ?
ನನ್ನ ಪತಿ ಸರ್ಕಾರಿ ನೌಕರರಾಗಿದ್ದು ಲೋಕಾಯುಕ್ತ
ಟ್ರ್ಯಾಪ್​ನಲ್ಲಿ ಸಿಲುಕಿ 5 ತಿಂಗಳ ಕಾಲ
ಅಮಾನತ್ತಿನಲ್ಲಿದ್ದರು. ದಿನಾಂಕ 5-1-2016ರಂದು ಮಾನಸಿಕ
ವ್ಯಾಕುಲತೆಯಿಂದಾಗಿ ಹೃದಯಾಘಾತವಾಗಿ ನಿಧನ
ಹೊಂದಿರುತ್ತಾರೆ. ನಾನು ನನ್ನ ಪತಿಯವರ ನೇಮಕಾತಿ
ಪ್ರಾಧಿಕಾರಕ್ಕೆ ಅನುಕಂಪದ ಮೇರೆಗೆ ನೇಮಕಾತಿ
ಮಾಡಿಕೊಳ್ಳಲು ಅರ್ಜಿಯನ್ನು ಸಲ್ಲಿಸಿದಾಗ, ಪತಿ
ಅಮಾನತ್ತಿನಲ್ಲಿದ್ದ ಕಾರಣ ಅನುಕಂಪದ ಆಧಾರದ ಮೇಲೆ
ಸರ್ಕಾರಿ ನೌಕರಿ ನೀಡಲು ಸಾಧ್ಯವಿಲ್ಲವೆಂದು ಅರ್ಜಿಯನ್ನು
ತಿರಸ್ಕರಿಸಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ಸೂಚಿಸಿ.
| ವಸಂತಕುಮಾರಿ, ಶಿವಮೊಗ್ಗ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ರೀತ್ಯಾ ನಿಮ್ಮ
ಪತಿಯವರು ಅಮಾನತ್ತಿನಲ್ಲಿದ್ದರೂ ನಿಯಮ 100ರಡಿಯಲ್ಲಿ
ಜೀವನಾಧಾರ ಭತ್ಯೆ ಪಡೆಯುತ್ತಿರುವುದರಿಂದ ಸರ್ಕಾರಿ
ನೌಕರರ ಎಲ್ಲ ಹಕ್ಕುಬಾಧ್ಯತೆಗಳನ್ನು ಹೊಂದಿರುತ್ತಾರೆ.
ಹೀಗಿರುವಲ್ಲಿ ನೇಮಕಾತಿ ಪ್ರಾಧಿಕಾರದವರು 1996ರ
(ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳ
ರೀತ್ಯಾ ಅನುಕಂಪದ ಆಧಾರದ ಮೇಲೆ ನೇಮಕಾತಿ
ನೀಡಬೇಕಾಗುತ್ತದೆ. ನೇಮಕಾತಿ ಪ್ರಾಧಿಕಾರಿಯ ನಿಮ್ಮ
ಅರ್ಜಿಯನ್ನು ತಿರಸ್ಕರಿಸಿದ್ದರೆ ನಿಯಮಾವಳಿಯ ಉಲ್ಲಂಘನೆ
ಆಗುತ್ತದೆ.
***
27-2-16.
ನನ್ನ ಸ್ನೇಹಿತರು ಆರೋಗ್ಯ ಇಲಾಖೆಯಲ್ಲಿ ಕಾರ್ಯ
ನಿರ್ವಹಿಸುತ್ತಿದ್ದು ಸೇವೆಯಲ್ಲಿರುವಾಗಲೇ ಮರಣ
ಹೊಂದಿರುತ್ತಾರೆ. ಅವರ ಪತ್ನಿ ಶಿಕ್ಷಣ ಇಲಾಖೆಯಲ್ಲಿ
ಶಿಕ್ಷಕರಾಗಿ ಸೇವೆಯಲ್ಲಿದ್ದಾರೆ. ಪತ್ನಿಗೆ 5 ಲಕ್ಷ ರೂ. ವಾರ್ಷಿಕ
ವೇತನ ಬರುತ್ತಿದೆ ಎಂಬ ಕಾರಣಕ್ಕೆ ಮೃತರ ಮಗನಿಗೆ
ಅನುಕಂಪದ ಆಧಾರದಲ್ಲಿ ಹುದ್ದೆ ನಿರಾಕರಿಸಲಾಗಿದೆ.
ಆರೋಗ್ಯ ಇಲಾಖೆಯ ಈ ಕ್ರಮ ಸರಿಯೇ? ದಯಮಾಡಿ
ಸೂಕ್ತ ಸಲಹೆ ನೀಡಬೇಕಾಗಿ ವಿನಂತಿ.
|ಕರಗುಂದ ರಾಮಣ್ಣ ಅಜ್ಜರಕಾಡು, ಉಡುಪಿ
‘ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ ಮೇಲೆ
ನೇಮಕಾತಿ) ನಿಯಮಗಳು 1996’ರ ನಿಯಮ 4ರಡಿಯಲ್ಲಿ
ಅನುಕಂಪದ ಆಧಾರದ ಮೇಲೆ ನೇಮಕವಾಗಬೇಕಾದರೆ ಮೃತ
ಸರ್ಕಾರಿ ನೌಕರನ ಕುಟುಂಬವು ಆರ್ಥಿಕ ಮುಗ್ಗಟ್ಟಿನಲ್ಲಿ
ಇರಬೇಕು ಅಥವಾ ಜೀವನಾಧಾರರಹಿತವಾಗಿರಬೇಕು. ಆ
ಕುಟುಂಬದ ಆವರ್ತಕ ಮಾಸಿಕ ವರಮಾನವು ಎಲ್ಲ
ಮೂಲಗಳಿಂದ ಪ್ರಥಮ ದರ್ಜೆ ಹುದ್ದೆಯ ವೇತನ ಶ್ರೇಣಿಯ
ಕನಿಷ್ಠ ಮತ್ತು ಗರಿಷ್ಠ ವೇತನದ ಸರಾಸರಿ ವೇತನಕ್ಕೆ
ಲಭ್ಯವಾಗುವ ಭತ್ಯೆಗಳನ್ನು ಒಳಗೊಂಡಂತೆ ಒಟ್ಟು
ಬರುವ ಉಪಲಬ್ಧಿಗಿಂತ ಕಡಿಮೆ ಇದ್ದರೆ ಅಂತಹ ನೌಕರನ
ಕುಟುಂಬವು ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಿದೆ ಎಂದು
ಪರಿಗಣಿಸಬೇಕೆಂದು ಸೂಚಿಸಲಾಗಿದೆ. ಹೀಗಿರುವಲ್ಲಿ ನಿಮ್ಮ
ಸ್ನೇಹಿತರ ವಾರ್ಷಿಕ ಆದಾಯವು 5 ಲಕ್ಷ ರೂ.
ಇರುವುದರಿಂದ ಇಲಾಖೆಯು ನೀಡಿರುವ ಹಿಂಬರಹ
ನಿಯಮಾವಳಿ ರೀತ್ಯಾ ಕ್ರಮಬದ್ಧವಾಗಿದೆ.
***
28-2-16.
ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯುವ
ನಿಯಮಾವಳಿಗಳೇನು?
ನಮ್ಮ ತಂದೆಯವರು ದಿನಾಂಕ 31-12-2015 ರಂದು ಸರ್ಕಾರಿ
ಸೇವೆಯಿಂದ ನಿವೃತ್ತರಾಗಿ ಅಂದೇ ರಾತ್ರಿ 11 ಗಂಟೆಗೆ
ಹೃದಯಾಘಾತದಿಂದ ನಿಧನ ಹೊಂದಿರುತ್ತಾರೆ. ನಾನು
ನಮ್ಮ ತಂದೆಯವರ ನೇಮಕಾತಿ ಪ್ರಾಧಿಕಾರಕ್ಕೆ ಅನುಕಂಪದ
ಆಧಾರದ ಮೇಲೆ ನೇಮಕಾತಿ ನೀಡಬೇಕೆಂದು ಅರ್ಜಿಯನ್ನು
ಸಲ್ಲಿಸಿದ್ದಕ್ಕಾಗಿ ನಿಮ್ಮ ತಂದೆಯವರು ದಿನಾಂಕ 31-12-2015
ರಂದು ಸಂಜೆ 5.30ಕ್ಕೆ ನಿವೃತ್ತರಾಗಿ ಅವರನ್ನು
ಕಾರ್ಯನಿವೃತ್ತಿಗೊಳಿಸಿರುವುದರಿಂದ ಅನುಕಂಪದ ಆಧಾರದ
ಮೇಲೆ ನೇಮಕಾತಿ ನೀಡಲು ಸಾಧ್ಯವಿಲ್ಲವೆಂದು ನನ್ನ
ಮನವಿಯನ್ನು ತಿರಸ್ಕರಿಸುತ್ತಾರೆ. ಇದಕ್ಕೆ ಸೂಕ್ತ ಪರಿಹಾರ
ಸೂಚಿಸಿ.
|ಬಿ.ಎಲ್. ಶ್ರೀನಾಥ್ ವಿಜಯಪುರ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ರೀತ್ಯಾ ಸರ್ಕಾರಿ
ನೌಕರನೊಬ್ಬ ದಿನದ 24 ಗಂಟೆಯೂ ನೌಕರನಾಗಿರುತ್ತಾನೆ. ಈ
ನಿಯಮಾವಳಿಯ ನಿಯಮ 8(24) ರೀತ್ಯಾ ದಿನದ
ಪರಿಭಾಷೆಯನ್ನು ತಿಳಿಸಿದ್ದು ಅದರಂತೆ ರಾತ್ರಿ 11 ಗಂಟೆ 59
ನಿಮಿಷದವರೆಗೂ ಸರ್ಕಾರಿ ನೌಕರನಾಗಿರುತ್ತಾನೆ. ಆ ಪ್ರಕಾರ
ನಿಮ್ಮ ತಂದೆಯವರು ಸಂಜೆ 5.30ಕ್ಕೆ ನಿವೃತ್ತರಾಗಿದ್ದರೂ
ಸೇವೆಯಲ್ಲಿರುವಾಗಲೇ ನಿಧನ ಹೊಂದಿದ ಪ್ರಕರಣದಂತೆ
ಕುಟುಂಬಕ್ಕೆ ಎಲ್ಲ ಸೇವಾ ಸೌಲಭ್ಯ ಮತ್ತು ಅನುಕಂಪದ
ಆಧಾರದ ಮೇಲೆ ನೇಮಕಾತಿ ಹಕ್ಕು ಇರುತ್ತದೆ. ಈ
ದೃಷ್ಟಿಯಿಂದ ನೀವು 1996ರ ಅನುಕಂಪದ ಆಧಾರದ ಮೇಲೆ
ನೇಮಕಾತಿ ನಿಯಮಗಳ ರೀತ್ಯಾ ನೇಮಕಾತಿ ಹೊಂದಲು
ಅರ್ಹರಾಗಿರುತ್ತೀರಿ. ನೇಮಕಾತಿ ಪ್ರಾಧಿಕಾರದ ನಿಮ್ಮ ಅರ್ಜಿ
ತಿರಸ್ಕರಿಸಿರುವುದು ನಿಯಮಾವಳಿಗೆ ವ್ಯತಿರಿಕ್ತವಾಗಿರುತ್ತದೆ.
***
29-2-16.
ವೈದ್ಯಕೀಯ ವೆಚ್ಚದ ಮರುಪಾವತಿ ಗರಿಷ್ಠ ಮೊತ್ತ
ಎಷ್ಟು?
ನಾನು ಪದವಿ ಪೂರ್ವ ಕಾಲೇಜಿನಲ್ಲಿ
ಉಪನ್ಯಾಸಕನಾಗಿದ್ದು, ಕಳೆದ 6 ವರ್ಷಗಳಿಂದ
ನರರೋಗಿಯಾಗಿದ್ದೇನೆ. ನಾನು ಒಂದು ವರ್ಷಕ್ಕೆ ಗರಿಷ್ಠ
ಎಷ್ಟು ಮೊತ್ತ ವೈದ್ಯಕೀಯ ವೆಚ್ಚದ ಮರುಪಾವತಿಗೆ
ಕ್ಲೇಮ್ ಮಾಡಿಕೊಳ್ಳಬಹುದು. ಈ ಬಗ್ಗೆ ವಿವರ ತಿಳಿಸಿ.
|ಕೆ.ಎನ್. ಅಶ್ವತ್ಥಪ್ಪ, ಬಾಗೇಪಲ್ಲಿ
ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಚಿಕಿತ್ಸಾ )
ನಿಯಮಗಳು 1963ರ ಪ್ರಕಾರ ನೀವು ಸರ್ಕಾರದಿಂದ
ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ
ಪಡೆಯಬಹುದಾಗಿದ್ದು ಚಿಕಿತ್ಸೆಯ ಪೂರ್ಣ ವೆಚ್ಚವನ್ನು ಈ
ನಿಯಮಾವಳಿ ರೀತ್ಯಾ ಮರುಪಾವತಿ ಪಡೆಯಬಹುದು. ಈ
ರೀತಿಯಾಗಿ ವೈದ್ಯಕೀಯ ವೆಚ್ಚವನ್ನು ನಿಯಮಾವಳಿ
ರೀತ್ಯಾ ಕಾಲಕಾಲಕ್ಕೆ ನಿಗದಿತ ಅತ್ಯವಶ್ಯಕ ಪ್ರಮಾಣ
ಪತ್ರದೊಂದಿಗೆ ಅರ್ಜಿಯನ್ನು ಸಲ್ಲಿಸಿ ಸಿಜಿಹೆಚ್​ಎಸ್ ಪದ್ಧತಿಯಲ್ಲಿ
ನಿಗದಿಪಡಿಸಿದ ಮೊಬಲಿಗಿನಷ್ಟು ಮರುಪಾವತಿ ಪಡೆಯಬಹುದು.

1 comment: